ಈ ಹಿಂದೆ ಬಿಜೆಪಿಯವರೇ ಟಿಪ್ಪುವನ್ನು ಹಾಡಿ ಹೊಗಳಿದ್ದರು: ಸಿದ್ದರಾಮಯ್ಯ

Update: 2018-01-19 15:56 GMT

ಬೆಂಗಳೂರು, ಜ.19: ಹಿಂದೂ ಧರ್ಮದ ಬಗ್ಗೆ ತಪ್ಪು ವ್ಯಾಖ್ಯಾನ ಮಾಡಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ಸಮಾಜದ ಸ್ವಾಸ್ಥ ಹಾಳು ಮಾಡುವವರ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಹಾಯೋಗಿ ವೇಮನ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರದ ವತಿಯಿಂದ ವೇಮನ ಸೇರಿ 27 ಮಂದಿ ಮಹಾಪುರುಷರು, ಮಾತೆಯರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಬಿಜೆಪಿಯವರ ಆಡಳಿತದಲ್ಲಿ ಇದನ್ನೆಲ್ಲ ಮಾಡಿದ್ದಾರಾ ? ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜಕೀಯ ಬಣ್ಣ ಬಳಿದು ದೊಡ್ಡ ವಿವಾದ ಮಾಡಿದರು. ಈ ಹಿಂದೆ ಬಿಜೆಪಿಯವರೇ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ವಿಶ್ರಾಂತ ಕುಲಪತಿ ಹಾಗೂ ಇತಿಹಾಸ ಪ್ರಾಧ್ಯಾಪಕ ಪ್ರೊ.ಬಿ.ಶೇಖ್ ಅಲಿ ಟಿಪ್ಪುಸುಲ್ತಾನ್ ಬಗ್ಗೆ ಬರೆದಿರುವ ಪುಸ್ತಕಕ್ಕೆ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಮುನ್ನುಡಿ ಬರೆದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೆಜೆಪಿ ಕಟ್ಟಿದಾಗ ಟಿಪ್ಪು ವೇಷ ಧರಿಸಿ ‘ಅಲ್ಲಾಹ್’ನ ಮೇಲಾಣೆ ಬಿಜೆಪಿಗೆ ಹೋಗಲ್ಲ ಎಂದಿದ್ದರು ಎಂದು ಮುಖ್ಯಮಂತ್ರಿ ಟೀಕಿಸಿದರು.

ಬಿಜೆಪಿಯವರಿಗೆ ಎರಡು ತಲೆ, ಎರಡು ನಾಲಿಗೆ ಇದೆ. ಜನರನ್ನು ಹಾದಿ ತಪ್ಪಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಅವರ ಭ್ರಮೆ ಎಂದಿಗೂ ಫಲ ನೀಡುವುದಿಲ್ಲ. ನಾವು ಯಾರ ಟೀಕೆಗಳಿಗೆ ಜಗ್ಗುವುದಿಲ್ಲ, ಅವರಿಗೆ ಸೊಪ್ಪು ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.

ಮಹಾಪುರುಷರ ಜೀವನ ಆದರ್ಶ, ಅನುಭವಗಳು, ಸಮಾಜಕ್ಕೆ ಮಾರ್ಗದರ್ಶಿ. ಅವರ ಆಚಾರ, ವಿಚಾರಗಳು ಸರ್ವ ಕಾಲಕ್ಕೂ ಪ್ರಸ್ತುತ. ಮನುಷ್ಯರು ಸಾಯುತ್ತಾರೆ. ಆದರೆ, ಮಹಾಪುರುಷರು, ಮಾತೆಯರು ಅಗಲಿದರೂ, ಜನಮಾನಸದಲ್ಲಿ ಜೀವಂತವಾಗಿರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಮಹಾಪುರುಷರು ಹಾಗೂ ಮಾತೆಯರು ಯಾವುದೇ ಜಾತಿ, ಸೀಮೆಗೆ ಮೀಸಲು ಅಲ್ಲ. ಜಾತ್ಯತೀತ ಹಾಗೂ ಸೀಮಾತೀತರು ಇಡೀ ರಾಷ್ಟ್ರದ ಸೊತ್ತು. ಹೀಗಾಗಿ, ಸಮಾಜ ಸುಧಾರಕ ನಾರಾಯಣಗುರು ಕೇರಳದವರಾದರೂ ನಾವು ಅವರ ಜಯಂತಿ ಆಚರಿಸುತ್ತಿದ್ದೇವೆ. ಜತೆಗೆ, ಬಸವ, ಅಂಬೇಡ್ಕರ್, ಕೆಂಪೇಗೌಡ, ಕೃಷ್ಣ, ಮಹಾವೀರ, ವಾಲ್ಮೀಕಿ, ಕನಕದಾಸ, ಭಗೀರಥ ಸೇರಿದಂತೆ ಎಲ್ಲ ಮಹಾಪುರುಷರನ್ನು ನಾವು ಗೌರವಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ವೇಮನ ವಿಶ್ವಮಾನವ ದೃಷ್ಟಿಕೋನವನ್ನು ಪ್ರತಿಪಾದಿಸಿದರು. ರಾಷ್ಟ್ರಕವಿ ಕುವೆಂಪು ಕೂಡ ವಿಶ್ವಮಾನವ ಸಂದೇಶ ಸಾರಿದ್ದಾರೆ. ಬಸವಾದಿ ಶರಣರು, ಕನಕದಾಸರು ಸಮ ಸಮಾಜದ ಪ್ರತಿಪಾದನೆ ಮಾಡಿದ್ದಾರೆ. ಸರ್ವಜ್ಞ, ತಿರುವಳ್ಳುವರ್, ಸಂತ ಕಬೀರ ಸೇರಿದಂತೆ ಅನೇಕ ಸಂತರು, ಶರಣರು, ದಾಸರು, ಸೂಫಿಗಳನ್ನು ಕೊಟ್ಟ ಪುಣ್ಯ ಭೂಮಿ ಇದು. ಇಂತಹ ನಾಡಿನಲ್ಲಿ ಹುಟ್ಟಿ ಅಪಚಾರ ಮಾಡಬಾರದು ಎಂದು ಅವರು ಹೇಳಿದರು.

ಸಮಾಜದ ಹಿತಕ್ಕಾಗಿ ತೆಲುಗಿನಲ್ಲಿ ವೇಮನ ನಾಲ್ಕು ಸಾವಿರ ವಚನಗಳನ್ನು ರಚಿಸಿದ್ದಾರೆ. ಮನುಷ್ಯ ಹುಟ್ಟಿದಾಗ ವಿಶ್ವಮಾನವ, ಆಮೇಲೆ ಅಲ್ಪಮಾನವನಾಗುತ್ತಾನೆ. ಜಾತಿ ವ್ಯವಸ್ಥೆ ಪ್ರಬಲವಾಗಿ ಬೇರೂರಿದೆ. ಸಮಾಜದ ಸುಧಾರಣೆಗೆ ಇಂತಹ ವ್ಯಕ್ತಿಗಳ ಪರಿಚಯ ಸಮಾಜಕ್ಕೆ ಆಗಬೇಕು ಎಂಬುವುದು ನಮ್ಮ ಉದ್ದೇಶ ಎಂದು ಅವರು ತಿಳಿಸಿದರು.

ಬಾಲ್ಯದಲ್ಲಿ ನೀರು ಸೇದಲು ಹೋಗುತ್ತಿದ್ದೆವು, ನೀರಿನ ಮೇಲಿನ ಕೊಳೆ ತೆಗೆಯುವ ಸಲುವಾಗಿ ಬಿಂದಿಗೆ ಬಿಡುತ್ತಿದ್ದೆವು. ಅದೇ ರೀತಿ ಸಮಾಜದ ಕೊಳೆ ತೆಗೆಯಬೇಕು. ಅದಕ್ಕಾಗಿ ಆಗಾಗ ಮಹಾನ್‌ ಪುರುಷರು, ಮಾತೆಯರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಆಚಾರ, ವಿಚಾರಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಸಮಾರಂಭದಲ್ಲಿ ದಾವಣಗೆರೆ ಜಿಲ್ಲೆಯ ರೆಡ್ಡಿ ಗುರುಪೀಠದ ಶ್ರೀ ವೇಮನಾನಂದ ಮಹಸ್ವಾಮಿ, ವಿಧಾನಸಭೆ ಉಪಾಧ್ಯಕ್ಷ ಶಿವಶಂಕರ ರೆಡ್ಡಿ, ಗೃಹ ಸಚಿವ ರಾಮಲಿಂಗಾರೆಡ್ಡಿ, ನಗರಾಭಿವೃದ್ಧಿ ಸಚಿವ ರೋಷನ್‌ಬೇಗ್, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್, ಉನ್ನತ ಶಿಕ್ಷಣ ಸಚಿವ ಬಸವರಾಜರಾಯರಡ್ಡಿ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಮೇಯರ್ ಸಂಪತ್‌ ರಾಜ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News