ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ

Update: 2018-01-19 16:36 GMT

ಬೆಂಗಳೂರು, ಜ.19: ನಗರದ ಬೆಳ್ಳಂದೂರು ಕೆರೆಯಲ್ಲಿ ಶುಕ್ರವಾರ ಮತ್ತೆ ಬೆಂಕಿ ಹೊತ್ತಿಕೊಂಡಿದೆ.

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದರಿಂದ ಸುತ್ತಲಿನ ಪ್ರದೇಶದಲ್ಲಿ ಹೊಗೆ ವ್ಯಾಪಕವಾಗಿ ಆವರಿಸಿದ್ದು, ಬೆಂಕಿಯಿಂದ ಹೆಚ್ಚಿನ ಹೊಗೆ ಮೇಲೇಳುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.

ಟಿ.ನಗರ ಸಮೀಪದ ಚೆಲ್ಲಾಘಟ್ಟ ಬದಿ ಕೆರೆಯಲ್ಲಿ ಮಧ್ಯಾಹ್ನ 12ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

ವಿಷಯುಕ್ತ ನೊರೆ ಉಗುಳುತ್ತಿರುವ ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ ಸರಕಾರ ಕೋಟಿ ಕೋಟಿ ವೆಚ್ಚ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇಂದು ಮತ್ತೆ ಯೆಮ್ಲೂರು, ಚೆಲ್ಲಾಘಟ್ಟ ಬದಿಯ ಬೆಳ್ಳಂದೂರು ಕೆರೆಯಲ್ಲಿ ಹೊಗೆ ಕಾಣಿಸಿಕೊಂಡಿದೆ. ವಿಷಕಾರಕ ರಾಸಾಯನಿಕ ವಸ್ತುಗಳು ಹೆಚ್ಚಿರುವುದರ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

910 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಈ ಕೆರೆಯಲ್ಲಿ ಕಳೆದ ವರ್ಷ ಫೆ.16ರಂದು ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ದಟ್ಟ ಹೊಗೆ ಮತ್ತು ಬೆಂಕಿ ಆವರಿಸಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದರು. ಮೂರು ವರ್ಷಗಳ ಹಿಂದೆ ಕೂಡ ಇದ್ದಕ್ಕಿದ್ದಂತೆ ಬೆಳ್ಳಂದೂರು ಕೆರೆಯಲ್ಲಿ ಭಾರೀ ನೊರೆ ಹಾಗೂ ಬೆಂಕಿ ಕಾಣಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News