ದೇವಾಲಯ ಬೇಡಿಕೆ ಬೇಡ: ಸಾಧುಗಳಿಗೆ ಸಿಎಂ ಆದಿತ್ಯನಾಥ್ ಕಿವಿಮಾತು

Update: 2018-01-20 04:11 GMT

ಅಲಹಾಬಾದ್, ಜ. 20: ರಾಜ್ಯದ ಸಾಧು ಸಂತರು ದೇವಸ್ಥಾನ ಬಗ್ಗೆ ಬೇಡಿಕೆ ಮಂಡಿಸಬೇಡಿ. ಇದು ಸ್ವತಃ ಸನ್ಯಾಸಿಯಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯದ ಸಾಧು ಸಂತರಿಗೆ ಶುಕ್ರವಾರ ಮಾಡಿಕೊಂಡ ಮನವಿ.

ಅಯೋಧ್ಯೆ ರಾಮಮಂದಿರದ ಬಗ್ಗೆ ಎಲ್ಲೂ ನೇರವಾಗಿ ಪ್ರಸ್ತಾವಿಸದ ಆದಿತ್ಯನಾಥ್, "ಪ್ರಧಾನಿ ನರೇಂದ್ರ ಮೋದಿಯವರು ಯೋಗ ಮತ್ತು ಕುಂಭಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟಂತೆ, ಇತರ ಜನಪ್ರಿಯ ಬೇಡಿಕೆಗಳನ್ನು ಕಾಲಕ್ರಮೇಣ ಈಡೇರಿಸಲಾಗುವುದು" ಎಂದು ಹೇಳಿದರು.

ಮಾಘ ಮೇಳದ ಸಂದರ್ಭ ವಿಶ್ವಹಿಂದೂ ಪರಿಷತ್ ಆಯೋಜಿಸಿದ್ದ ಸಂತ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಇದಕ್ಕೂ ಮುನ್ನ ಮಾತನಾಡಿದ ಗಣ್ಯರು, ಸಂತರು ಹಗೂ ವಿಎಚ್‌ಪಿ ಮುಖಂಡರು, ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ವಿಎಚ್‌ಪಿ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಮ್ಮ ಭಾಷಣದಲ್ಲಿ, "ರಾಮಮಂದಿರ ನಿರ್ಮಾಣ ದೇಶದ ಹೆಮ್ಮೆಯ ಸಂಕೇತ" ಎಂದ ಹೇಳಿದ್ದರು.

"ಸಂತರು ಯೋಗಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಡಲು ಒತ್ತಾಯಿಸಿದ್ದರೇ ? ಮೋದಿ ಪ್ರಧಾನಿಯಾದಾಗ ಅದನ್ನು ಸಾಧಿಸಿದರು. ಅದೇ ರೀತಿ ಕುಂಭಕ್ಕೆ ಪರಂಪರೆಯ ಸ್ಥಾನಮಾನ ನೀಡುವ ವಿಚಾರದಲ್ಲೂ ಆಗಿದೆ" ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿಪಾದಿಸಿದರು. ಯಾವುದೇ ಒತ್ತಾಯ ಮಾಡದೇ ಬೇಡಿಕೆಗಳನ್ನು ಈಡೇರಿಸುತ್ತಿರುವಾಗ ಸಂತರು ಹೊಸ ಬೇಡಿಕೆಗಳನ್ನು ಮುಂದಿಡಬಾರದು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News