ಸುದ್ದಿ-ಶುದ್ಧಿಯ ರೈ

Update: 2018-01-21 07:06 GMT

ಇತ್ತೀಚೆಗೆ ಶಿರಸಿಯಲ್ಲಿ ನಡೆದ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ನಂತರ ಬಿಜೆಪಿ ಯುವ ಮೋರ್ಚಾದವರು ವೇದಿಕೆಗೆ ಗೋಮೂತ್ರ ಸಿಂಪಡಿಸಿ, ‘ಹಿಂದೂ ಸಮಾಜದವರು ಗೋವನ್ನು ಪೂಜನೀಯ ಸ್ಥಾನದಲ್ಲಿಟ್ಟು ಆರಾಧಿಸುತ್ತಾರೆ. ಗೋಮಾಂಸ ಭಕ್ಷಣೆ ಮಾಡುವ ಹಾಗೂ ಹಿಂದೂ ದೇವತೆಗಳನ್ನು ಅಪಮಾನ ಮಾಡುವ ವ್ಯಕ್ತಿಗಳ ಭೇಟಿಯಿಂದ ಶಿರಸಿ ನಗರವೇ ಅಪವಿತ್ರವಾದಂತಾಗಿದೆ. ಇಂತಹ ಸೋಗಲಾಡಿ ಬುದ್ಧಿಜೀವಿ ಪ್ರಕಾಶ್ ರೈ ಅವರನ್ನು ಸಮಾಜ ಕ್ಷಮಿಸದು. ಆ ಪ್ರಯುಕ್ತ ಕಾರ್ಯಕ್ರಮ ನಡೆದ ಧಾರ್ಮಿಕ ಕ್ಷೇತ್ರವನ್ನು ಶುದ್ಧಗೊಳಿಸಲಾಯಿತು’ ಎಂದರು. ಅದು ಸುದ್ದಿಯಾಯಿತು. ಪರ-ವಿರೋಧ ಚರ್ಚೆಯಾಯಿತು. ವಾರವಿಡೀ ಜೀವಂತವಾಗಿತ್ತು. ಪ್ರಕಾಶ್ ರೈ ಭಾಗವಹಿಸಿದ್ದ ಸಭೆ ನಡೆದದ್ದು ಕಲ್ಯಾಣ ಮಂಟಪದಲ್ಲಿ. ಆ ಸಭೆಯಲ್ಲಿ ಅವರೊಬ್ಬರೇ ಇರಲಿಲ್ಲ. ವೇದಿಕೆಯಲ್ಲಿದ್ದವರು ಮಾತನಾಡಿದ್ದು ಮನುಷ್ಯವಿರೋಧಿ ಮಾತುಕತೆಯಲ್ಲ. ಅಷ್ಟಕ್ಕೂ ಅದು ಮಠವಲ್ಲ, ಧಾರ್ಮಿಕ ಕ್ಷೇತ್ರವಲ್ಲ. ಅದಕ್ಕಿಂತಲೂ ಮುಖ್ಯವಾಗಿ ಅದೊಂದು ಜೀವವಿರುವ ಕಟ್ಟಡವಲ್ಲ. ಅದನ್ನು ಕಟ್ಟಿದವರು ‘ಪವಿತ್ರ’ ಹಿಂದೂಗಳು ಮಾತ್ರವೇ ಅಲ್ಲ. ಆದರೂ ಆ ಜಾಗಕ್ಕೆ ಸಂಘಪರಿವಾರದವರು ಗೋಮೂತ್ರ ಸಿಂಪಡಿಸಿ ಶುದ್ಧಿ ಮಾಡಿ ‘ವಿವೇಕಿ’ಗಳೆನ್ನಿಸಿಕೊಂಡರು.

ಪ್ರಕಾಶ್ ರೈ ಎಂದಾಕ್ಷಣ ಸಂಘ ಪರಿವಾರದವರು ತುದಿಗಾಲ ಮೇಲೆ ನಿಂತು ತಕ್ಷಣ ವಿರೋಧಿಸುವುದೇಕೆ ಎನ್ನುವುದರಲ್ಲಿಯೂ ಕೆಲವು ಕುತೂಹಲಕರ ಅಂಶಗಳಿವೆ. ಎಡಪಂಥೀಯ ಧೋರಣೆಗಳತ್ತ ಒಲವುಳ್ಳ ಪ್ರಕಾಶ್ ರೈ ಬಹುಭಾಷ ನಟ. ಜನಪ್ರಿಯತೆ ಮತ್ತು ಗ್ಲ್ಯಾಮರ್ ಕಾರಣಕ್ಕೆ ಸುದ್ದಿ ಮಾಧ್ಯಮಗಳು ತಕ್ಷಣ ಸ್ಪಂದಿಸಿ ಆದ್ಯತೆ ಮೇಲೆ ಪ್ರಚಾರ ನೀಡುತ್ತವೆ. ಆ ಪ್ರಚಾರ ಸಂಘ ಪರಿವಾರದವರಿಗೂ ಸಿಗುತ್ತದೆ. ಆ ಮೂಲಕ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ, ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರವಿದೆ. ಈ ವಿವಾದ ಹೊಗೆಯಾಡುತ್ತಿರುವಾಗಲೇ ಹೈದರಾಬಾದ್‌ನಲ್ಲಿ ನಡೆದ ‘ಇಂಡಿಯಾ ಟುಡೆ ಕಾಂಕ್ಲೇವ್’ನಲ್ಲಿ ಭಾಗವಹಿಸಿದ ಪ್ರಕಾಶ್ ರೈ, ‘ಅವರು ನನ್ನನ್ನು ಹಿಂದೂ ವಿರೋಧಿ ಎನ್ನುತ್ತಾರೆ. ಆದರೆ ನಾನು ಮೋದಿ ವಿರೋಧಿ, ಅಮಿತ್ ಶಾ ವಿರೋಧಿ ಮತ್ತು ಅನಂತಕುಮಾರ್ ಹೆಗಡೆ ವಿರೋಧಿಯಾಗಿದ್ದೇನೆ. ಕೊಲೆಯನ್ನು ಬೆಂಬಲಿಸುವ ಇವರ್ಯಾರೂ ಹಿಂದೂಗಳಲ್ಲ. ಒಬ್ಬ ಚುನಾಯಿತ ಜನಪ್ರತಿನಿಧಿ ಒಂದು ಧರ್ಮವನ್ನು ಭೂಮಿಯಿಂದಲೇ ಅಳಿಸಿ ಹಾಕಬೇಕು ಎನ್ನುತ್ತಾರೆ. ತಮ್ಮ ಸಚಿವರಿಗೆ ಈ ಬಗ್ಗೆ ಪ್ರಧಾನಿ ಎಚ್ಚರಿಕೆ ನೀಡಬೇಕು. ತಮ್ಮ ಸಚಿವರು ಬಾಯ್ಮುಚ್ಚುವಂತೆ ಪ್ರಧಾನಿ ಹೇಳದಿದ್ದರೆ ಅವರು ಹಿಂದೂವಲ್ಲ ಎಂದು ನಾನು ಹೇಳುತ್ತೇನೆ’ ಎಂದಿದ್ದಾರೆ. ಅದೀಗ ಮತ್ತೆ ಸುದ್ದಿಯಾಗಿದೆ. ವಿವಾದ ಹುಟ್ಟುಹಾಕಿದೆ.

ಹಾಗೆ ನೋಡಿದರೆ, ಗೌರಿ ಲಂಕೇಶ್ ಹತ್ಯೆ ಪ್ರಕಾಶ್ ರೈರನ್ನು ತುಂಬಾನೆ ಡಿಸ್ಟರ್ಬ್ ಮಾಡಿದೆ. ಹತ್ಯೆಯಾದ ನಂತರದ ದಿನಗಳಿಂದ ಇಲ್ಲಿಯವರೆಗೆ ಪ್ರಕಾಶ್ ರೈ ಸಂಘ ಪರಿವಾರದ ವಿರುದ್ಧ, ಪ್ರಧಾನಿ ಮೌನದ ವಿರುದ್ಧ, ಬಲಪಂಥೀಯ ಕುಟಿಲ ನೀತಿಗಳ ವಿರುದ್ಧ ಮಾತನಾಡುತ್ತಲೇ ಬಂದಿದ್ದಾರೆ. ಅವರು ಎತ್ತುವ ಪ್ರಶ್ನೆ ಮತ್ತು ಮಾಡುವ ಟೀಕೆಗಳನ್ನು ಖಂಡಿಸಬೇಕೆಂಬ ಧಾವಂತಕ್ಕೆ ಬಿದ್ದ ಸಂಘಪರಿವಾರದವರು ಪ್ರಕಾಶ್ ರೈರ ವೈಯಕ್ತಿಕ ಬದುಕನ್ನು ಎಳೆದು ತಂದು ರಾಡಿ ಎಬ್ಬಿಸಿದ್ದಾರೆ. ವಿವಾದವನ್ನಾಗಿ ಮಾಡಿ ಸುದ್ದಿ ಮಾಧ್ಯಮಗಳಿಗೆ ಆಹಾರ ಹಂಚಿದ್ದಾರೆ. ಒಳ್ಳೆಯದೋ ಕೆಟ್ಟದೋ, ಅದು ಅನಾಯಾಸವಾಗಿ ಪ್ರಕಾಶ್ ರೈ ಸುದ್ದಿಯಲ್ಲಿರುವಂತೆ ಮಾಡಿದೆ. ಅಸಲಿಗೆ, ಸದಾ ಸುದ್ದಿಯಲ್ಲಿರಬೇಕೆಂಬುದನ್ನು ಪ್ರಕಾಶ್ ರೈ ಕೂಡ ಬಯಸುತ್ತಾರೆ. ಜೊತೆಗೆ ಅವರ ವಿಭಿನ್ನ ವ್ಯಕ್ತಿತ್ವವೂ ಅದಕ್ಕೆ ಒತ್ತಾಸೆಯಾಗಿ ನಿಂತಿದೆ. ಅವರಿರುವ ಜಾಗದಲ್ಲಿ ಭಿನ್ನ ಆಲೋಚನೆ, ಮಾರ್ಗ, ಮಾತು, ವಾದ-ವಿವಾದ ಇದ್ದೇ ಇರುತ್ತದೆ. ಅದಕ್ಕೆ ಕಾರಣ- ಅವರು ಬೆಳೆದುಬಂದ ರೀತಿ, ಅವರ ಏರಿಳಿತದ ಬದುಕು, ಅದು ಕಲಿಸಿದ ಪಾಠ, ವಿವಿಧ ಸ್ತರಗಳ ಜನರೊಂದಿಗೆ ಬೆರೆತು, ವಿವಿಧ ಭಾಷೆಗಳನ್ನು ಕಲಿತು, ಎದ್ದು ಬಿದ್ದು ಬೆಳೆದು ಗಳಿಸಿದ ಅನುಭವ. ಜೊತೆಗೆ ಜಗತ್ತಿನ ಅತ್ಯುತ್ತಮ ಚಿಂತಕರೆನಿಸಿಕೊಂಡವರ ಕೃತಿಗಳನ್ನು ಓದುವುದು, ವಿಷಯತಜ್ಞ ಗಣ್ಯರೊಂದಿಗೆ ಕೂತು ಚರ್ಚಿಸುವುದು ಅವರನ್ನು ವಿಭಿನ್ನ ವ್ಯಕ್ತಿಯನ್ನಾಗಿ ರೂಪಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಪ್ರಕಾಶ್ ರೈರ ಮತ್ತೊಂದು ಮುಖವೂ ಇದೆ. ತಾನೊಬ್ಬ ಸಾಮಾನ್ಯ ವ್ಯಕ್ತಿ ಎಂದುಕೊಂಡು ಎಲ್ಲರೊಂದಿಗೂ ಬೆರೆಯುವ ಪ್ರಕಾಶ್ ರೈ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ ಎನ್ನುವವರೂ ಇದ್ದಾರೆ.

ಅದಷ್ಟೇ ಅಲ್ಲ, ದೂರದ ಮೆಹಬೂಬ್ ನಗರವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಲು ಪ್ರಯತ್ನಿಸಿದ್ದು; ತೆಲುಗು ಲೇಖಕ ಚಲಂ ಅವರ ಮನೆಯನ್ನು ರಿನೊವೇಟ್ ಮಾಡಿಸುವ ಬಗ್ಗೆ ಮನಸ್ಸು ಮಾಡಿದ್ದೂ ಇದೆ. ಹಾಗೆಯೇ ಸಾವಯವ ಕೃಷಿ ಕುರಿತು, ಪರಿಸರ ಕುರಿತು, ವನ್ಯಜೀವಿ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಉಂಟು ಮಾಡುವ ನಿಟ್ಟಿನಲ್ಲಿ ಅವರೊಂದಿಗೆ ಬೆರೆತು ಕಲಿತು ಕಲಿಸುವ ಸಾಮಾಜಿಕ ಕಾಳಜಿಯೂ ಇದೆ. ಸೌಹಾರ್ದಕ್ಕಾಗಿ ತುಡಿಯುವ ಮಾನವೀಯತೆಯೂ ಇದೆ. ಇಲ್ಲೆಲ್ಲ ನಮಗೆ ಕಾಣುವ ಪ್ರಕಾಶ್ ರೈ ಅವರ ಬಹಳ ಮುಖ್ಯವಾದ ಗುಣ- ಸಾಮಾನ್ಯರ ಮಾತನ್ನು ಕಿವಿಗೊಟ್ಟು ತಾಳ್ಮೆಯಿಂದ ಆಲಿಸುವುದು. ಅದು ಅವರ ಪ್ಲಸ್ ಪಾಯಿಂಟ್. ಕೇಳಿಸಿಕೊಳ್ಳುವ ಅವರ ತಾಳ್ಮೆಗೆ, ತನ್ಮಯತೆಗೆ ಎಂಥವರೂ ಬೆರಗಾಗುತ್ತಾರೆ. ಕೇಳಿಸಿಕೊಂಡ ನಂತರ, ಅದೇ ಮಾತುಗಳಿಗೆ ತಮ್ಮ ಬುದ್ಧಿವಂತಿಕೆ ಬಳಸಿ, ಬೆರಸಿ, ಭಿನ್ನ ರೀತಿಯಲ್ಲಿ ಮಂಡಿಸಿ ಬೆರಗುಗೊಳಿಸುತ್ತಾರೆ. ಅಲ್ಲಿರುವ ಜನಗಳ ನಡುವೆಯೇ ವಿಭಿನ್ನ ವ್ಯಕ್ತಿಯಾಗಿ ಹೊರಹೊಮ್ಮುತ್ತಾರೆ.

ಭಿನ್ನವಾಗಿ ಕಾಣಬೇಕು, ಜನ ಗುರುತಿಸಬೇಕು, ಸುದ್ದಿಯ ಕೇಂದ್ರಬಿಂದು ತಾವಾಗಬೇಕೆಂದು ಬಯಸುತ್ತಾರೆ. ಅದನ್ನವರು ಪ್ರಜ್ಞಾಪೂರ್ವಕವಾಗಿಯೇ ಮಾಡುತ್ತಾರೆ. ಪ್ರಕಾಶ್ ರೈ 90ರ ದಶಕದಲ್ಲಿ ನಟನಾಗಬೇಕೆಂದು ಕನ್ನಡ ರಂಗಭೂಮಿಯಲ್ಲಿ, ಟಿವಿ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ, ಬದುಕೆಂಬ ಬಾಡಿಗೆ ಸೈಕಲ್ ತುಣಿದು ಸುಸ್ತಾಗಿದ್ದಾಗ ಅವರ ನೆರವಿಗೆ ಬಂದವರು ನೂರಾರು ಜನ. ಅದೇ ಸಂದರ್ಭದಲ್ಲಿ ನಟಿ ಗೀತಾ ಜೊತೆ ನಟಿಸಿದ ‘ಹರಕೆಯ ಕುರಿ’ ಅವರ ಚಿತ್ರಬದುಕಿಗೆ ತಿರುವು ನೀಡಿತು. ಗೀತಾ ಈತನಲ್ಲಿರುವ ಪ್ರತಿಭೆಯನ್ನು ಗುರುತಿಸಿ, ತಮಿಳಿನ ಹೆಸರಾಂತ ನಿರ್ದೇಶಕ ಕೆ.ಬಾಲಚಂದರ್‌ರಿಗೆ ಪರಿಚಯಿಸಿದರು. ಅವರು ತಮ್ಮ ‘ಡುಯೆಟ್’ ಚಿತ್ರದಲ್ಲಿ ನಟಿಸಲು ಅವಕಾಶ ಕಲ್ಪಿಸಿಕೊಟ್ಟರು. ಪ್ರಕಾಶ್ ರೈ ಅವರಲ್ಲೊಂದು ವಿಶೇಷವಾದ ಗುಣವಿದೆ, ಅದು ತನ್ನ ಸಂಪರ್ಕಕ್ಕೆ ಬಂದವರನ್ನು ಕ್ಷಣಮಾತ್ರದಲ್ಲಿ ಮರುಳುಮಾಡುವ ಗುಣ. ಅದು ಮಾತಿನಲ್ಲಿ, ನಡತೆಯಲ್ಲಿ, ನಟನೆಯಲ್ಲಿ, ಬುದ್ಧಿವಂತಿಕೆಯಲ್ಲಿ- ಯಾವುದಾದರೂ ಒಂದು ಬಗೆಯಲ್ಲಿ ಅವರನ್ನು ಮೆಚ್ಚಿಸಿಬಿಡುತ್ತಾರೆ. ತಮಿಳು ಚಿತ್ರರಂಗದಲ್ಲಿ ನೆಲೆಯೂರುವ ಸಮಯದಲ್ಲಿ ಆಗಿದ್ದೂ ಅದೆ. ತಮಿಳರಿಗಿಂತ ಹೆಚ್ಚು ಸ್ಫುಟವಾಗಿ ತಮಿಳು ಭಾಷೆ ಕಲಿತರು. ನಟನೆಯಲ್ಲಿ ಮಹಾನ್ ನಟರನ್ನು ಮೀರಿಸಿದರು. ತಮಿಳರೇ ಆಗಿಹೋದರು. ತಮಿಳಿನ ಹೆಸರಾಂತ ನಿರ್ದೇಶಕರೆಲ್ಲರ ಚಿತ್ರಗಳಲ್ಲಿ, ಪ್ರತಿಯೊಂದು ಚಿತ್ರದಲ್ಲೂ ಪ್ರಕಾಶ್ ರೈ ಇದ್ದೇ ಇರಬೇಕೆಂಬ ರೀತಿಯಲ್ಲಿ, ಬಿಡುವಿಲ್ಲದಂತೆ ನಟಿಸಿದರು.

ಈ ನಡುವೆ, 1996 ರಲ್ಲಿ ಬಂದ ಮಣಿರತ್ನಂ ನಿರ್ದೇಶನದ ‘ಇರುವರ್’ ಚಿತ್ರ ಇವರನ್ನು ಮತ್ತೊಂದು ಎತ್ತರಕ್ಕೆ ನಿಲ್ಲಿಸಿತ್ತು. ಅದರಲ್ಲಿನ ಕರುಣಾನಿಧಿ ಪಾತ್ರಕ್ಕೆ ಮಣಿರತ್ನಂ ಮೊದಲು ಯೋಚಿಸಿದ್ದು ನಾನಾ ಪಾಟೇಕರ್ ಅವರನ್ನು. ಆಮೇಲೆ ಮಿಥುನ್ ಚಕ್ರವರ್ತಿ ಕೂಡ ಬಂದು ಹೋದರು. ಕೊನೆಗೆ ಪ್ರಕಾಶ್ ರೈ ಆಯ್ಕೆಯಾದರು. ಕಪ್ಪಗಿದ್ದ ಪ್ರಕಾಶ್ ರೈ ಪಕ್ಕಾ ತಮಿಳಿಗನಾಗಿ, ಕರುಣಾನಿಧಿಯೇ ಆಗಿ, ತಮಿಳು ಭಾಷೆಯನ್ನು ಬಸಿದು ನಟನೆಯೊಂದಿಗೆ ಬೆರಸಿ ಉಣಬಡಿಸಿದ್ದರು. ತಮಿಳರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದರು. ಅಷ್ಟೇ ಅಲ್ಲ, ಮಲಯಾಳಂ, ತೆಲುಗು, ಹಿಂದಿ ಭಾಷೆಯ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡರು. ರಾಷ್ಟ್ರೀಯ ಮಟ್ಟದ ಶ್ರೇಷ್ಠ ನಟ ಪ್ರಶಸ್ತಿಗೆ ಭಾಜನರಾದರು. ವಿಶೇಷ ಗೌರವ, ಪುರಸ್ಕಾರಕ್ಕೆ ಪಾತ್ರರಾದರು. ಹಣ, ಖ್ಯಾತಿ ಗಳಿಸಿದರು. ಕೇವಲ ಅವಕಾಶಕ್ಕಾಗಿ ಅಲೆಯುತ್ತಿದ್ದವರು ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಬೆಟ್ಟದಂತೆ ಬೆಳೆದು ನಿಂತರು.

ಪ್ರಕಾಶ್ ರೈ ಹುಟ್ಟು ಕಲಾವಿದ. ಮಿಕ್ಕವರು ಕ್ಯಾಮರಾ ಮುಂದೆ ನಟಿಸಿದರೆ, ಇವರು ಮನುಷ್ಯರನ್ನೇ ಕ್ಯಾಮರಾ ಎಂದು ಭಾವಿಸಿ ನಟಿಸುವ ನಟ ಭಯಂಕರ. ನಟನೆಯಲ್ಲಿ ಅವರನ್ನು ಮೀರಿಸಬಲ್ಲ ಮತ್ತೊಬ್ಬನಿಲ್ಲ. ದೈತ್ಯ ಪ್ರತಿಭೆ. ಆ ಪ್ರತಿಭೆಗೆ ತಕ್ಕಂತೆ ಅಹಂಕಾರವೂ ಇದೆ. ಅದೇ ಅವರಿಗೆ ತಮಿಳು, ತೆಲುಗು ಚಿತ್ರರಂಗದಲ್ಲಿ ಮುಳುವಾಗಿ ಪರಿಣಮಿಸಿ, ಸದ್ಯಕ್ಕೆ ಅವಕಾಶಗಳನ್ನು ಕಿತ್ತುಕೊಂಡಿದೆ. ಆದರೆ ಆ ಅಹಂಕಾರದ ಬಗ್ಗೆ ಅವರಿಗೆ ಯಾವ ವಿಷಾದವೂ ಇಲ್ಲ. ಏಕೆಂದರೆ, ‘ಪ್ರತಿಭಾವಂತರೆಲ್ಲ ಅಹಂಕಾರಿಗಳು’ ಎನ್ನುವುದು ಅವರ ಹುಂಬ ನಂಬಿಕೆ. ಅದಕ್ಕವರು ತರ್ಕಬದ್ಧವಾಗಿ ವಾದ ಮಂಡಿಸಬಲ್ಲರು. ಬೆಂಗಳೂರಿನಲ್ಲಿ ಅಂತಹ ಮೂರ್ನಾಲ್ಕು ಜನರ ಆಪ್ತಕೂಟವೊಂದಿದೆ. ಅದಕ್ಕವರು ‘ನಿದ್ರಾಹೀನರ ಸಂಘ’ ಎಂದು ಕರೆದುಕೊಳ್ಳುತ್ತಾರೆ. ಇಡೀ ರಾತ್ರಿ ನಿದ್ರೆ ಮಾಡುವುದಿಲ್ಲ. ಯಾರಾದರೂ ಹೇಗೆ, ಏಕೆ ಎಂದು ಪ್ರಶ್ನಿಸಿದರೆ- ‘ನಾವು ಮಲಗಿದಾಗ ಜಗತ್ತು ಮುಂದೆ ಹೋಗಿಬಿಡುತ್ತದೆ ಎಂಬ ಭಯ. ಅದಕ್ಕಾಗಿ ನಾವು ಸದಾ ಎಚ್ಚರವಾಗಿದ್ದು, ಜಗತ್ತನ್ನು ಹಿಂದೆ ಹಾಕುತ್ತಿದ್ದೇವೆ’ ಎನ್ನುವುದೂ ಉಂಟು. ಇದು ಕೊಂಚ ಅತೀ ಅನಿಸಿದರೂ, ಪ್ರತಿಭಾವಂತರು ಇರುವುದೇ ಹೀಗೆ ಎಂದು ಸಮರ್ಥನೆಗಿಳಿಯುತ್ತಾರೆ.

ಪ್ರಕಾಶ್ ರೈ ಸ್ನೇಹಮಯಿ. ಅವರೊಂದಿಗೆ ಮುನಿಸಿಕೊಂಡವರನ್ನೂ ಕರೆದು ಮಾತನಾಡಿಸಿ ತಪ್ಪನ್ನು ತಿಳಿಗೊಳಿಸುತ್ತಾರೆ. ಯಾವುದೋ ಕಾರಣಕ್ಕೆ ಪ್ರಕಾಶ್ ರೈರನ್ನು ನಿರ್ದೇಶಕ ಕೆ.ಬಾಲಚಂದರ್ ದೂರವಿಟ್ಟಿದ್ದರು. ರಜನಿ-ಕಮಲ್, ಇಬ್ಬರೂ ಬಾಲಚಂದರ್ ಕೆತ್ತಿಟ್ಟ ಕಲಾಕೃತಿಗಳಾದರೂ, ಅವರ ಮೇಲೊಂದು ಚಿತ್ರ ಮಾಡಲು ಮನಸ್ಸು ಮಾಡಿರಲಿಲ್ಲ. ಅಂತಹ ಸಂದರ್ಭದಲ್ಲಿ ಪ್ರಕಾಶ್ ರೈ ‘ಪೋಯ್’ ಚಿತ್ರ ನಿರ್ಮಾಣಕ್ಕೆ ಕೈ ಹಾಕಿ, ಬಾಲಚಂದರ್ ಮನವೊಲಿಸಿ ಆ ಚಿತ್ರದಲ್ಲಿ ನಟಿಸುವಂತೆ ಮಾಡಿದ್ದೂ ಇದೆ. ಹಾಗೆಯೇ ಬೇರೆ ಭಾಷೆಯ ಚಿತ್ರಗಳಲ್ಲಿ ಅವಕಾಶಗಳು ಕಡಿಮೆಯಾದಾಗ, ಕನ್ನಡದತ್ತ ಮುಖ ಮಾಡಿ, ಕಡಿಮೆ ವೆಚ್ಚದಲ್ಲಿ ಉತ್ತಮ ಅಭಿರುಚಿಯುಳ್ಳ ಚಿತ್ರ ನಿರ್ಮಿಸಿ, ಕೆಲವು ಗೆದ್ದು, ಹಲವು ಸೋತು ಕೈ ಸುಟ್ಟುಕೊಂಡಿದ್ದೂ ಇದೆ. ಈ ನಡುವೆ ಗೆಳೆಯರೊಂದಿಗೆ ಸೇರಿ ಸ್ಯಾಟಲೈಟ್ ಚಾನಲ್ ಆರಂಭಿಸಲು ಮುಂದಾಗಿ ಅರ್ಧಕ್ಕೇ ನಿಂತಿದೆ. ಯೋಗರಾಜ್ ಭಟ್ ನಿರ್ದೇಶಕರನ್ನಾಗಿ ಮಾಡಿ ಹಿಂದಿ ಚಿತ್ರ ನಿರ್ಮಿಸುವುದಾಗಿ ಘೋಷಿಸಿದ್ದು, ಘೋಷಣೆಯಾಗಿಯೇ ಉಳಿದಿದೆ. ಪ್ರಕಾಶ್ ರೈ ಮಹತ್ವಾಕಾಂಕ್ಷಿ. ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಚಲನಶೀಲ ವ್ಯಕ್ತಿ. ಸದ್ಯಕ್ಕೆ ಚಲನಚಿತ್ರಗಳಲ್ಲಿ ಅವಕಾಶ ಕಡಿಮೆಯಾಗಿರುವ ಕಾರಣ, ಕೋಮು ಸೌಹಾರ್ದ ಕದಡುವವರ ವಿರುದ್ಧ ಸಿಕ್ಕ ವೇದಿಕೆಗಳನ್ನು ಬಳಸಿಕೊಂಡು ಧೈರ್ಯವಾಗಿ ಮಾತನಾಡುತ್ತಿದ್ದಾರೆ. ಶಾಂತಿ-ಸಹಬಾಳ್ವೆ ಬಯಸುವವರ ಮನ ಗೆದ್ದಿದ್ದಾರೆ. ಆ ಮೂಲಕ ಎಡಪಂಥೀಯರ ಹೊಸ ಹುಮ್ಮಸ್ಸಿಗೆ ಕಾರಣರಾಗಿದ್ದಾರೆ. ಇದು ಚುನಾವಣಾ ರಾಜಕಾರಣಕ್ಕಿಳಿಯುವ ಮುನ್ಸೂಚನೆಯೇ ಎಂದರೆ, ನಿಖರ ಉತ್ತರವಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ರಾಜಕಾರಣವನ್ನು ಅರಿಯುವ, ಅದರ ಭಾಗವಾಗುವ ಹಕ್ಕಿದೆ. ಇರಲಿ.

ಒಂದೇ ದಿನದಲ್ಲಿ ನಾಲ್ಕಾರು ಚಿತ್ರಗಳಲ್ಲಿ, ನಾಲ್ಕಾರು ಪಾತ್ರಗಳಲ್ಲಿ, ನಾಲ್ಕಾರು ಶೇಡ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರಕಾಶ್ ರೈ, ಇವತ್ತಿನ ಈ ಸೈದ್ಧಾಂತಿಕ ಬದ್ಧತೆಯನ್ನು, ಹೋರಾಟವನ್ನು ಕೂಡ ನಟನೆ ಎಂದುಕೊಂಡರೆ ಎಂಬ ಅನುಮಾನ ಕೆಲವರಲ್ಲಿದೆ. ಮುಂದಿನ ದಿನಗಳ ರೈ ನಡೆಯೇ ಅದಕ್ಕೆ ಉತ್ತರ ಕೊಡಬಲ್ಲದು, ಕಾದು ನೋಡೋಣ.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News