ಬಟ್ಲರ್ ಶತಕ: ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್‌ಗೆ ಸರಣಿ ಜಯ

Update: 2018-01-21 17:55 GMT

ಸಿಡ್ನಿ, ಜ.21: ಇಂಗ್ಲೆಂಡ್ ತಂಡ ಜೋಸ್ ಬಟ್ಲರ್ ಶತಕದ ನೆರವಿನಲ್ಲಿ ಆಸ್ಟ್ರೇಲಿಯ ವಿರುದ್ಧದ ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 16 ರನ್‌ಗಳ ರೋಚಕ ಜಯ ಗಳಿಸಿದ್ದು, ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಆಡಲು ಬಾಕಿ ಇರುವಾಗಲೇ ಇಂಗ್ಲೆಂಡ್ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ರವಿವಾರ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 302 ರನ್ ಗಳಿಸಿತ್ತು.

ಗೆಲುವಿಗೆ 303 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 286 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆಸ್ಟ್ರೇಲಿಯ ಆ್ಯಶಸ್ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ವಿರುದ್ಧ 4-0 ಅಂತರದಲ್ಲಿ ವಶಪಡಿಸಿಕೊಂಡಿತ್ತು. ಆದರೆ ಇದೀಗ ಏಕದಿನ ಸರಣಿಯನ್ನು ಹ್ಯಾಟ್ರಿಕ್ ಸೋಲಿನೊಂದಿಗೆ ಕಳೆದುಕೊಂಡಿದೆ.

ಆಸ್ಟ್ರೇಲಿಯಕ್ಕೆ ಗೆಲ್ಲಲು ಉತ್ತಮ ಅವಕಾಶ ಇತ್ತು. ಆದರೆ ನಾಯಕ ಸ್ಟೀವ್ ಸ್ಮಿತ್(45) ಮತ್ತು ಮಿಚೆಲ್ ಮಾರ್ಷ್(55) ಅವರು ನಿರ್ಣಾಯಕ ಹಂತದಲ್ಲಿ ಔಟಾದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯದ ಗೆಲುವಿನ ಅವಕಾಶ ದೂರವಾಯಿತು.

   ಆಸ್ಟ್ರೇಲಿಯದ ಇನಿಂಗ್ಸ್ ಆರಂಭಿಸಿದ ಆ್ಯರೊನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಮೊದಲ ವಿಕೆಟ್‌ಗೆ 3.5 ಓವರ್‌ಗಳಲ್ಲಿ 24 ರನ್ ಸೇರಿಸಿದರು. ವಾರ್ನರ್ (8) ಅವರು ಬೇಗನೇ ನಿರ್ಗಮಿಸಿದರು. ಕ್ಯಾಮರೂನ್ ವೈಟ್(17) ಅವರು ಮಾರ್ಕ್‌ವುಡ್‌ಗೆ ವಿಕೆಟ್ ಒಪ್ಪಿಸಿದಾಗ ತಂಡದ ಸ್ಕೋರ್ 8.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 44 ಆಗಿತ್ತು. ಬಳಿಕ ಫಿಂಚ್ ಮತ್ತು ನಾಯಕ ಸ್ಟೀವ್ ಸ್ಮಿತ್ 3ನೇ ಜೊತೆಯಾಟದಲ್ಲಿ 69 ರನ್ ಸೇರಿಸಿ ತಂಡದ ಸ್ಕೋರ್‌ನ್ನು 20 ಓವರ್‌ಗಳಲ್ಲಿ 113ಕ್ಕೆ ಏರಿಸಿದರು. ಫಿಂಚ್ 53 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 62 ರನ್ ಗಳಿಸಿದರು. 21ನೇ ಓವರ್‌ನ ಮೊದಲ ಎಸೆತದಲ್ಲಿ ರಶೀದ್ ಅವರು ಫಿಂಚ್ ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.

ಸ್ಮಿತ್ ಮತ್ತು ಮಿಚೆಲ್ ಮಾರ್ಷ್ ಜೊತೆಯಾಗಿ 4ನೆೇ ವಿಕೆಟ್‌ಗೆ 68 ರನ್‌ಗಳ ಜೊತೆಯಾಟ ನೀಡಿದರು. 45 ರನ್ ಗಳಿಸಿದ ಸ್ಮಿತ್ ಅವರು ಮಾರ್ಕ್ ವುಡ್ ಎಸೆತದಲ್ಲಿ ಬಟ್ಲರ್‌ಗೆ ಸುಲಭದ ಕ್ಯಾಚ್ ನೀಡಿ ನಿರ್ಗಮಿಸಿದರು. ಮಿಚೆಲ್ ಮಾರ್ಷ್ 55 ರನ್(66ಎ,4ಬೌ) ಗಳಿಸಿ ರಶೀದ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಮಾರ್ಕ್ ಸ್ಟೋನಿಸ್ ಮತ್ತು ಟಿಮ್ ಪೈನ್ ಜೊತೆಯಾಗಿ ಹೋರಾಟ ನಡೆಸಿದರು. ಆದರೆ ಅವರಿಗೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಸ್ಟೋನಿಸ್ 43 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 56 ರನ್ ಗಳಿಸಿ ಔಟಾದರು. ಪೈನ್ ಔಟಾಗದೆ 31 ರನ್(35ಎ,1ಬೌ) ಮತ್ತು ಕಮಿನ್ಸ್ ಔಟಾಗದೆ 1 ರನ್ ಗಳಿಸಿದರು. ಇಂಗ್ಲೆಂಡ್‌ನ ಮಾರ್ಕ್ ವುಡ್, ವೋಕ್ಸ್ ಮತ್ತು ರಶೀದ್ ತಲಾ 2 ವಿಕೆಟ್ ಹಂಚಿಕೊಂಡರು.

 ಇದಕ್ಕೂ ಮೊದಲು ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ 5ನೇ ಶತಕ ದಾಖಲಿಸಿದ್ದರು. ಅವರು 102ನೇ ಏಕದಿನ ಪಂದ್ಯದಲ್ಲಿ 5ನೇ ಶತಕ ದಾಖಲಿಸಿ ಆಸ್ಟ್ರೇಲಿಯಕ್ಕೆ ಕಠಿಣ ಸವಾಲು ವಿಧಿಸಲು ನೆರವಾಗಿದ್ದರು. ಬಟ್ಲರ್ ಔಟಾಗದೆ 100 ರನ್(83ಎ, 6ಬೌ,4ಸಿ), ಕ್ರಿಸ್ ವೋಕ್ಸ್ ಔಟಾಗದೆ 53 ರನ್ (36ಎ, 5ಬೌ,2ಸಿ), ಇಯಾನ್ ಮೊರ್ಗನ್ 41 ರನ್, ಬೈರ್‌ಸ್ಟೋವ್ 39 ರನ್, ಜೋ ರೂಟ್ 27 ರನ್ ಗಳಿಸಿದ್ದರು. ಬಟ್ಲರ್ ಮತ್ತು ವೋಕ್ಸ್ 7ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ತಂಡದ ಖಾತೆಗೆ ಉಪಯುಕ್ತ 113 ರನ್‌ಗಳ ಕೊಡುಗೆ ನೀಡಿದ್ದರು. ಇದರಿಂದಾಗಿ ಇಂಗ್ಲೆಂಡ್‌ನ ಸ್ಕೋರ್ 300ರ ಗಡಿ ದಾಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News