ಸರಣಿ ಸೋಲು ಬಳಿಕ ವಿರಾಟ್ ಕೊಹ್ಲಿಗೆ ಎಲ್ಲೆಡೆ ಟೀಕಾಸ್ತ್ರ

Update: 2018-01-21 17:57 GMT

ಜೋಹಾನ್ಸ್‌ಬರ್ಗ್, ಜ.21: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಬಾರಿ ಸವಾಲು ಎದುರಿಸುತ್ತಿದ್ದಾರೆ. ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಅಂತರದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಕೊಹ್ಲಿ ನಾಯಕತ್ವದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.

29ರ ಹರೆಯದ ಕೊಹ್ಲಿಗೆ 2018ನೇ ವರ್ಷದ ಆರಂಭ ಚೆನ್ನಾಗಿಲ್ಲ. ಅವರು ದ್ವಿತೀಯ ಟೆಸ್ಟ್‌ನಲ್ಲಿ ಆಕರ್ಷಕ 153 ರನ್ ಗಳಿಸಿದ್ದರೂ, ತಂಡದ ಸಹ ಆಟಗಾರರು ವೈಫಲ್ಯ ಅನುಭವಿಸಿದರು.

ಎರಡು ಟೆಸ್ಟ್‌ಗಳಲ್ಲಿ ಭಾರತದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಸರಳ ಸವಾಲು ಪಡೆಯಲು ನೆರವಾಗಿದ್ದರು. ಆದರೆ ಬ್ಯಾಟ್ಸ್ ಮನ್‌ಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಎಡವಿದರು. ತಂಡದ ಆಯ್ಕೆಯಲ್ಲಿ ಮಾಡಿಕೊಂಡ ಎಡವಟ್ಟು ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಎರಡು ಟೆಸ್ಟ್‌ಗಳಲ್ಲ್ಲಿ ಸೋಲು ಅನುಭವಿಸಿರುವ ಟೀಮ್ ಇಂಡಿಯಾ ವೈಟ್‌ವಾಶ್ ತಪ್ಪಿಸಲು ನೋಡುತ್ತಿದೆ. ವಾಂಡರರ್ಸ್‌ ಸ್ಟೇಡಿಯಂನಲ್ಲಿ ಬುಧವಾರ ಆರಂಭವಾಗಲಿರುವ ಮೂರನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಗೆಲ್ಲಲೇಬೇಕಾಗಿದೆ. ದಕ್ಷಿಣ ಆಫ್ರಿಕ ಸರಣಿ ಜಯಿಸಿರುವ ಹಿನ್ನೆಲೆಯಲ್ಲಿ ಒತ್ತಡದಿಂದ ಪಾರಾಗಿದೆ. ಮೂರನೇ ಟೆಸ್ಟ್‌ನಲ್ಲಿ ಕೊಹ್ಲಿ ಯಾರಿಗೆಲ್ಲಾ ಅವಕಾಶ ನೀಡುತ್ತಾರೆ ಎನ್ನುವ ಕುತೂಹಲವಿದೆ. ಕಳೆದ ಎರಡು ಟೆಸ್ಟ್‌ಗಳಲ್ಲಿ ಅವಕಾಶ ವಂಚಿತ ಉಪನಾಯಕ ಅಜಿಂಕ್ಯ ರಹಾನೆ ಅಂತಿಮ ಟೆಸ್ಟ್‌ನಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ರಹಾನೆ ವಿದೇಶದಲ್ಲಿ ಯಶಸ್ವಿ ಬ್ಯಾಟ್ಸ್ ಮನ್ ಆಗಿದ್ದರೂ, ಅವರಿಗೆ ಅವಕಾಶ ಸಿಗಲಿಲ್ಲ. ಲೋಕೇಶ್ ರಾಹುಲ್ ವೈಫಲ್ಯ ಅನುಭವಿಸಿರುವ ಹಿನ್ನೆಲೆಯಲ್ಲಿ ಮತ್ತೆ ಅವರಿಗೆ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ. ಶಿಖರ್ ಧವನ್ ಆರಂಭಿಕ ದಾಂಡಿಗನಾಗಿ ಅವಕಾಶ ಪಡೆಯುವುದು ಖಚಿತವಾಗಿದೆ.

ಚೇತೇಶ್ವರ ಪೂಜಾರ ಕಳೆದ ಟೆಸ್ಟ್‌ನಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ರನೌಟಾಗಿ ನಿರಾಸೆ ಗೊಂಡಿದ್ದರು. ಅವರ ವೈಫಲ್ಯ ತಂಡದ ಬ್ಯಾಟಿಂಗ್‌ನ ಮೇಲೆ ಪರಿಣಾಮ ಬೀರಿತ್ತು.

ಎರಡನೇ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಕೊಹ್ಲಿಯನ್ನು ಹೊರತುಪಡಿಸಿದರೆ ಮುರಳಿ ವಿಜಯ್ ಮಿಂಚಿದ್ದರು. ಅವರು ಮೊದಲ ಇನಿಂಗ್ಸ್‌ನಲ್ಲಿ 46 ರನ್ ಗಳಿಸಿದ್ದರು. ಆರ್.ಅಶ್ವಿನ್ 38 ರನ್ ಕೊಡುಗೆ ನೀಡಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಎಲ್ಲರೂ ವೈಫಲ್ಯ ಅನುಭವಿಸಿದಾಗ ರೋಹಿತ್ ಶರ್ಮಾ 47 ರನ್ ಮತ್ತು ಮುಹಮ್ಮದ್ ಶಮಿ 28 ರನ್‌ಗಳ ಕೊಡುಗೆ ನೀಡಿ ಮಿಂಚಿದ್ದರು.

ಭಾರತದ ಬೌಲರ್‌ಗಳ ಪೈಕಿ ಎರಡೂ ಇನಿಂಗ್ಸ್‌ಗಳಲ್ಲಿ ರವಿಚಂದ್ರನ್ ಅಶ್ವಿನ್ ,ಮುಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ತಲಾ 5 ವಿಕೆಟ್ ಪಡೆದಿದ್ದರು. ಜಸ್‌ಪ್ರೀತ್ ಬುಮ್ರಾ 3 ವಿಕೆಟ್ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News