ನೆತನ್ಯಾಹು ಭಾರತ ಭೇಟಿ: ಮಾಧ್ಯಮಗಳಲ್ಲಿ ಸುದ್ದಿಯಾಗದ ಸುದ್ದಿಗಳೇನು?

Update: 2018-01-22 06:45 GMT

ಹೊಸದಿಲ್ಲಿ, ಜ.22: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿ ಹಿಂದಿರುಗಿದ್ದಾರೆ. ಅವರ ಭೇಟಿಗೆ ಎಣಿಸಿದಂತೆ ಭಾರೀ ಪ್ರಚಾರ ದೊರಕಿತ್ತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾತ್ಮ ಗಾಂಧಿಯ ಸಾಬರಮತಿ ಆಶ್ರಮಕ್ಕೂ, ಗಾಂಧಿ ಸಮಾಧಿಗೂ ಕರೆದೊಯ್ದರು, ಇಸ್ರೇಲ್ ಪ್ರಧಾನಿ ಮತ್ತವರ ಪತ್ನಿ ತಾಜ್ ಮಹಲ್ ಗೂ ಭೇಟಿ ನೀಡಿದ್ದಾರೆ. ಟೆಕ್ನಾಲಜಿ ಸೆಂಟರ್ ಒಂದರ ಉದ್ಘಾಟನೆ ಹಾಗೂ ಉದ್ಯಮಿಗಳ ಜತೆ ಸಭೆಯೂ ನಡೆದಿತ್ತು. ಇಸ್ರೇಲ್ ಪ್ರಧಾನಿಯ ಭಾರತ ಭೇಟಿಯನ್ನು ಒಂದು ದೊಡ್ಡ ಐತಿಹಾಸಿಕ ಘಟನೆಯೇನೋ ಎಂಬಂತೆ ಮಾಧ್ಯಮಗಳೂ ಬಿಂಬಿಸಿದವು. ನಿಜಾರ್ಥದಲ್ಲಿ ಹೇಳಬೇಕಾದರೆ ಎರಡೂ ದೇಶಗಳ ಮಾಧ್ಯಮಗಳು ತಂತಮ್ಮ ಪ್ರಧಾನಿ ಕಾರ್ಯಾಲಯಗಳಿಂದ ಹರಿದು ಬಂದ ಪತ್ರಿಕಾ ಹೇಳಿಕೆಗಳನ್ನೇ ಅವಲಂಬಿಸಿ ಅವುಗಳನ್ನೇ ವೈಭವೀಕರಿಸಿದ್ದವು. ಇವುಗಳೆಲ್ಲದರ ನಡುವೆ ಇಸ್ರೇಲ್ ಪ್ರಧಾನಿಯ ಭೇಟಿಯನ್ನು ವಿರೋಧಿಸಿ ಹಾಗೂ ಫೆಲೆಸ್ತೀನ್ ಗೆ ಬೆಂಬಲಾರ್ಥವಾಗಿ ಭಾರತೀಯರು ನಡೆಸಿದ ಪ್ರತಿಭಟನೆಗಳನ್ನು ಮಾಧ್ಯಮಗಳು ಕಡೆಗಣಿಸಿದ್ದವು.

ವೈಭವೀಕೃತ ಸುದ್ದಿಗಳ ನಡುವೆ ಎರಡೂ ದೇಶಗಳ ಪ್ರಧಾನಿಗಳು ಶಸ್ತ್ರಾಸ್ತ್ರ ಒಪ್ಪಂದಗಳ ಬಗ್ಗೆ ನಡೆಸಿದ ಮಾತುಕತೆಗಳ ಬಗ್ಗೆ ಎಲ್ಲೂ ವರದಿಗಳು ಚರ್ಚೆ ನಡೆಸಿಲ್ಲ. ಭಾರತವು ಇಸ್ರೇಲ್ ಶಸ್ತ್ರಾಸ್ತ್ರಗಳ ಪ್ರಮುಖ ಖರೀದಿದಾರನಾಗಿದ್ದು, 2012 ಹಾಗೂ 2016 ನಡುವೆ ತನ್ನ ಶೇ.41ರಷ್ಟು ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ನಿಂದ ಪಡೆದುಕೊಂಡಿತ್ತು. ಬಿಸಿನೆಸ್ ಲೀಡರ್ಸ್‌ ಜತೆಗಿನ ಮಾತುಕತೆಗಳಲ್ಲಿ ಶಸ್ತ್ರಾಸ್ತ್ರ ತಯಾರಕರು ಹಾಗೂ ಗುತ್ತಿಗೆದಾರರೂ ಇದ್ದರು. ಈ ಸಭೆಯಲ್ಲಿ ಏನು ನಡೆಯಿತು ಎಂದು ಮಾಧ್ಯಮಗಳು ಚರ್ಚಿಸುವ ಗೋಜಿಗೆ ಹೋಗಿಲ್ಲ.

ಎಪ್ರಿಲ್ 2017ರಲ್ಲಿ ಭಾರತ ಮತ್ತು ಇಸ್ರೇಲ್ 2 ಬಿಲಿಯನ್ ಡಾಲರ್ ಮೌಲ್ಯದ ಮಿಲಿಟರಿ ಉಪಕರಣ ಖರೀದಿಗಾಗಿ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದವು. ಆದರೆ ಇಸ್ರೇಲಿ ಶಸ್ತ್ರಾಸ್ತ್ರ ಕಂಪೆನಿಗಳೊಂದಿಗೆ ಸ್ಪೈಕ್ ಆ್ಯಂಟಿ-ಟ್ಯಾಂಕ್ ಕ್ಷಿಪಣಿಗಳ ಖರೀದಿ ಸಂಬಂಧ 400 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದವನ್ನು ತಾನು ಮಾನ್ಯ ಮಾಡುವುದಿಲ್ಲ ಎಂದು ಭಾರತ ಸರಕಾರ ಈ ಕಂಪೆನಿಗಳಿಗೆ ಜನವರಿಯಲ್ಲಿ ತಿಳಿಸಿತ್ತು. ಆದರೆ ನೆತನ್ಯಾಹು ತಮ್ಮ ಭೇಟಿಯ ವೇಳೆ ಈ ಒಪ್ಪಂದ ಮತ್ತೆ ಮೇಜಿನ ಮೇಲೆ ಬಂದಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದರು. ಜನವರಿ 2ರ ನೋಟಿಸ್ ಅನ್ನು ನಿರ್ಲಕ್ಷ್ಯಿಸುವಂತೆ ಮೋದಿ ಅವರಿಗೆ ಹೇಳಿರಬೇಕಿದ್ದೆಂಬುದು ಸ್ಪಷ್ಟ.

ಭಾರತ ಮತ್ತು ಇಸ್ರೇಲ್ ದೇಶಗಳ ನಡುವಣ ಸಂಬಂಧಗಳು ಶಸ್ತ್ರಾಸ್ತ್ರಗಳ ಮೇಲೆಯೇ ಅವಲಂಬಿತವಾಗಿದೆ. ಆದರೆ ಇತ್ತೀಚಿಗಿನ ಭೇಟಿಯ ಮುಖ್ಯ ಉದ್ದೇಶವೇ ಅದಾಗಿತ್ತೆಂಬುದನ್ನು ಹೊರಗೆಡಹಿದ್ದರೆ ಅದು ಚೆನ್ನಾಗಿರುತ್ತಿರಲಿಲ್ಲ. ಇಬ್ಬರೂ ನಾಯಕರೂ ಶೋಕಿ ಬಯಸುತ್ತಾರೆ. ಶಸ್ತ್ರಾಸ್ತ್ರ ಒಪ್ಪಂದಕ್ಕೆ ಅವರು ಬಂದಿದ್ದಾರೆಂದರೆ ಅದು ಸರಿ ಬಾರದು ಎಂದೇ ಇಷ್ಟೆಲ್ಲಾ ಅಬ್ಬರದ ಪ್ರಚಾರ ನಡೆದಿತ್ತು.

ಸರಕಾರದ ಮೇಕ್ ಇನ್ ಇಂಡಿಯಾ ನೀತಿಯಂತೆ ಕಾರ್ಯಾಚರಿಸುತ್ತಿರುವ ಡಿಆರ್‌ಡಿಒಗೆ ಇದು ದೊಡ್ಡ ಹೊಡೆತ ಬಿದ್ದಂತೆ. ದೇಶೀಯ ಕ್ಷಿಪಣಿಗಳನ್ನು ಹೊಂದುವ ಬದಲು ಇಸ್ರೇಲಿ ತಂತ್ರಜ್ಞಾನದ ಶಸ್ತ್ರಾಸ್ತ್ರಗಳನ್ನು ಪಡೆಯಲು ನಾವು ಹಣ ನೀಡಬೇಕಿದೆ.

ಪ್ರತಿಭಟನೆಗಳು: ತರುವಾಯ ದೇಶಾದ್ಯಂತ ಇಸ್ರೇಲ್ ಪ್ರಧಾನಿಯ ಭೇಟಿಯ ವಿರುದ್ಧ ಪ್ರತಿಭಟನೆಗಳು ನಡೆದವು. ರಾಜಧಾನಿಯಲ್ಲಿ ಕಮ್ಯುನಿಸ್ಟ್ ಪಕ್ಷಗಳು ಹಾಗೂ ಫೆಲೆಸ್ತೀನ್ ಪರ ಸಂಘಟನೆಗಳೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು. ನೆತನ್ಯಾಹು ಅವರನ್ನು ಆಹ್ವಾನಿಸಿ ಫೆಲೆಸ್ತೀನ್ ಅನ್ನು ಆಕ್ರಮಿಸಿದ ಇಸ್ರೇಲ್ ಕ್ರಮವನ್ನು ಭಾರತ ಮಾನ್ಯ ಮಾಡಿದಂತೆ ಎಂದು ಕಮ್ಯುನಿಸ್ಟ್ ನಾಯಕ ಪ್ರಕಾಶ್ ಕಾರಟ್ ಹೇಳಿದ್ದರು.

ವರದಿ ಕೃಪೆ: ಅಲ್ ಜಝೀರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News