ಕಾರ್ಖಾನೆಯಲ್ಲಿ ಬಾಲ ಕಾರ್ಮಿಕರಿಂದ ಕೆಲಸ: ಆರೋಪ

Update: 2018-01-23 16:40 GMT

ಬೆಂಗಳೂರು, ಜ.23: ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾರಾಯಿ ಪಾಳ್ಯದಲ್ಲಿರುವ ಲೆದರ್ ಬ್ಯಾಗ್ ತಯಾರಿಕಾ ಕಾರ್ಖಾನೆಯಲ್ಲಿ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿ 20 ಕ್ಕೂ ಅಧಿಕ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ ಎಂದು ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸಂತೋಷ್ ಕುಮಾರ್, ಇಲ್ಲಿನ ಶಹಬಾಝ್ ಎಂಬವರು ಅಕ್ರಮವಾಗಿ ಬ್ಯಾಗ್ ತಯಾರಿಕೆ ಮಾಡುತ್ತಿದ್ದು, ಅದರಲ್ಲಿ ಬಾಲ ಕಾರ್ಮಿಕರನ್ನಿಟ್ಟುಕೊಂಡು ದುಡಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ನಮ್ಮ ಸಮಿತಿಯಿಂದ ಸ್ಥಳಕ್ಕೆ ಭೇಟಿ ನೀಡಿದ್ದು, ಅಕ್ರಮವಾಗಿ ಬಾಲ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿರುವುದು ಕಂಡು ಬಂದಿದೆ ಎಂದು ಹೇಳಿದರು.

ಈ ಸಂಬಂಧ ವಿಡಿಯೋ ಮಾಡಿಕೊಳ್ಳಲಾಗಿದೆ. ಆದರೆ, ನಾವು ಇಲ್ಲಿಗೆ ಭೇಟಿ ನೀಡಿದ ವಿಷಯ ತಿಳಿದು ಸ್ಥಳಕ್ಕೆ ಬಂದ ಮಾಲಕ ಶಹಬಾಝ್ ನಮ್ಮನ್ನು ಕಾರ್ಖಾನೆ ಕೊಠಡಿಯೊಂದರಲ್ಲಿ ಕೂಡಿ ಹಾಕಿ ನಾವು ಪೊಲೀಸರಿಗೆ ತಿಂಗಳಿಗೆ ವಂತಿಗೆ ನೀಡುತ್ತೇವೆ ಎಂದು ಹೇಳಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಮ್ಮನ್ನು ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದೊಯ್ದು ನಮ್ಮ ವಿರುದ್ಧವೇ ಸುಳ್ಳು ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ಕಾರ್ಮಿಕ ಕಾನೂನು ಉಲ್ಲಂಘಿಸಿ ಬಾಲ ಕಾರ್ಮಿಕರನ್ನು ದುಡಿಸಿಕೊಂಡು ಹಣ ಗಳಿಸುತ್ತಿರುವ ಶಹಬಾಜ್‌ರನ್ನು ಕೂಡಲೇ ಬಂಧಿಸಬೇಕು ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇದರಲ್ಲಿ ಶಾಮೀಲಾಗಿರುವ ಸಂಪಿಗೆಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಅಂಜನ್‌ಕುಮಾರ್ ಹಾಗೂ ಇನ್ನಿತರರನ್ನು ಸೇವೆಯಿಂದ ವಜಾ ಮಾಡಬೇಕು. ಈ ಕಾರ್ಖಾನೆಗೆ ಬೀಗ ಹಾಕಿ ಅಮಾಯಕ ಬಾಲ ಕಾರ್ಮಿಕರನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News