ವೈಟ್ ವಾಶ್ ತಪ್ಪಿಸಲು ಟೀಮ್ ಇಂಡಿಯಾದ ಪ್ರಯತ್ನ

Update: 2018-01-23 18:39 GMT

ಜೋಹಾನ್ಸ್‌ಬರ್ಗ್, ಜ.23: ಆತಿಥೇಯ ದಕ್ಷಿಣ ಆಫ್ರಿಕ ವಿರುದ್ಧ ಮೂರು ಟೆಸ್ಟ್‌ಗಳ ಸರಣಿಯ ಎರಡು ಟೆಸ್ಟ್‌ಗಳಲ್ಲಿ ಸತತ ಸೋಲು ಅನುಭವಿಸಿ ಸರಣಿ ಕಳೆದುಕೊಂಡಿರುವ ಟೀಮ್ ಇಂಡಿಯಾ ಬುಧವಾರ ಇಲ್ಲಿ ಆರಂಭವಾಗಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಗೆಲುವಿಗಾಗಿ ಹೋರಾಟ ನಡೆಸಲಿದೆ.

ನಂ.1 ಟೆಸ್ಟ್ ತಂಡವಾಗಿರುವ ಭಾರತ ಅಂತಿಮ ಟೆಸ್ಟ್‌ನಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇದೀಗ ವೈಟ್‌ವಾಶ್ ತಪ್ಪಿಸುವುದು ಭಾರತದ ಮುಂದಿರುವ ದೊಡ್ಡ ಸವಾಲು.

ಕೊಹ್ಲಿ ಪಡೆ ಕೇಪ್‌ಟೌನ್‌ನಲ್ಲಿ ಮೊದಲ ಟೆಸ್ಟ್‌ನಲ್ಲಿ ದ.ಆಫ್ರಿಕ 72 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ಸೆಂಚೂರಿಯನ್‌ನಲ್ಲಿ ಎರಡನೇ ಟೆಸ್ಟ್‌ನಲ್ಲಿ 135 ರನ್‌ಗಳ ಅಂತರದಲ್ಲಿ ಸೋತು ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿದೆ.

2014ರಲ್ಲಿ ಭಾರತ ತಂಡ ಆಸ್ಟ್ರೇಲಿಯದಲ್ಲಿ ಸರಣಿ ಸೋಲು ಅನುಭವಿಸಿತ್ತು. ಆಗ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಸರಣಿಯ ಮಧ್ಯದಲ್ಲೇ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿ , ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.

 ಧೋನಿ ಉತ್ತರಾಧಿಕಾರಿಯಾಗಿ ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು. 2015ರಿಂದ ಕೊಹ್ಲಿ ನಾಯಕತ್ವದಲ್ಲಿ ಭಾರತ ಸತತ 9 ಸರಣಿಗಳಲ್ಲಿ ಗೆಲುವು ದಾಖಲಿಸಿತ್ತು. ಆಫ್ರಿಕ ವಿರುದ್ಧ ಸೋಲಿನೊಂದಿಗೆ ಭಾರತದ ಅಜೇಯ ಸರಣಿ ಗೆಲುವಿನ ಓಟ ಕೊನೆಗೊಂಡಿದೆ.

ಆಫ್ರಿಕ ವಿರುದ್ಧ ಭಾರತ ಮೂರು ಟೆಸ್ಟ್‌ಗಳಲ್ಲಿ ಸೋಲು ಅನುಭವಿಸಿದರೂ, ನಂ.1 ಸ್ಥಾನ ಕೈ ತಪ್ಪದು ಎನ್ನುವುದು ಇಲ್ಲಿ ಗಮನಾರ್ಹ. ಎರಡನೇ ಟೆಸ್ಟ್‌ನಲ್ಲಿ ಭಾರತ ಸೋಲು ಅನುಭವಿಸಿದ ಬಳಿಕ ತಂಡದ ಅಂತಿಮ ಹನ್ನೊಂದರ ಆಯ್ಕೆಯಲ್ಲಿ ಅನುಸರಿಸಿರುವ ಕ್ರಮದ ಬಗ್ಗೆ ಸಾರ್ವತ್ರಿಕ ಟೀಕೆ ವ್ಯಕ್ತವಾದ ಬಳಿಕ ವೇಗಿ ಭುವನೇಶ್ವರ ಕುಮಾರ್ ತಂಡಕ್ಕೆ ವಾಪಸಾಗುವ ಸಾಧ್ಯತೆ ಇದೆ. ಜಸ್‌ಪ್ರೀತ್ ಬುಮ್ರಾ ಎರಡೂ ಟೆಸ್ಟ್‌ಗಳಲ್ಲೂ ಸ್ಥಾನ ಗಿಟ್ಟಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಅವರು ಕುಮಾರ್‌ಗೆ ಸ್ಥಾನ ತೆರವುಗೊಳಿಸಬೇಕಾಗುತ್ತದೆ.

 ಸೋಮವಾರ ನೆಟ್ ಅಭ್ಯಾಸದಲ್ಲಿ ಐವರು ಬೌಲರ್‌ಗಳು ಕಾಣಿಸಿಕೊಂಡಿದ್ದರು. ಕುಮಾರ್, ಇಶಾಂತ್ ಶರ್ಮಾ, ಉಮೇಶ್ ಯಾದವ್ ಮತ್ತು ಮುಹಮ್ಮದ್ ಶಮಿ ಟೆಸ್ಟ್‌ಗೆ ತಯಾರಿ ನಡೆಸಿದ್ದಾರೆ.

 ಉಪನಾಯಕ ಅಜಿಂಕ್ಯ ರಹಾನೆ ಎರಡು ಟೆಸ್ಟ್‌ಗಳಲ್ಲೂ ಆಡಿರಲಿಲ್ಲ. ಅವರು ರವಿವಾರ ಚೆನ್ನಾಗಿ ಅಭ್ಯಾಸ ನಡೆಸಿದ್ದಾರೆ. ಈ ಕಾರಣದಿಂದಾಗಿ ರಹಾನೆ ಅಂತಿಮ ಟೆಸ್ಟ್‌ಗೆ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ರೋಹಿತ್ ಶರ್ಮಾ 4 ಇನಿಂಗ್ಸ್‌ಗಳಲ್ಲಿ ಕೇವಲ 78 ರನ್ ಗಳಿಸಿದ್ದರು. ಈ ಕಾರಣದಿಂದಾಗಿ ಅವರಿಗೆ ಮೂರನೇ ಟೆಸ್ಟ್‌ನಲ್ಲಿ ಆಡಲು ಅವಕಾಶ ಸಿಗಬಹುದೇ ಎನ್ನುವುದು ಕುತೂಹಲ ಕೆರಳಿಸಿದೆ.

ಭಾರತ ಆರು ಮಂದಿ ದಾಂಡಿಗರೊಂದಿಗೆ ಮತ್ತು ಐವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಲಿದೆ. ಯಾಕೆಂದರೆ ವಾಂಡರರ್ಸ್‌ನ ಪಿಚ್ ವೇಗಿಗಳ ಸ್ನೇಹಿಯಾಗಿದೆ.

  ನಾಯಕ ವಿರಾಟ್ ಕೊಹ್ಲಿಗೆ ವಿದೇಶದಲ್ಲಿ ನಿಜವಾದ ಸವಾಲು ಎದುರಾಗಿದೆ. ಆರು ತಿಂಗಳ ಹಿಂದೆ ಶ್ರೀಲಂಕಾದಲ್ಲಿ ಅವರ ತಂಡ 3-0 ಅಂತರದಲ್ಲಿ ಸರಣಿ ಜಯಿಸಿತ್ತು. ಆದರೆ ಇದೀಗ ಅದೃಷ್ಟ ಕೈ ಕೊಟ್ಟಿದೆ. ಟೀಮ್ ಇಂಡಿಯಾ ಇಷ್ಟರ ತನಕ ದಕ್ಷಿಣ ಆಫ್ರಿಕ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಿಲ್ಲ. ಕೊಹ್ಲಿ ಪಡೆಗೆ ಸೋಲಿನಲ್ಲೂ ಇತಿಹಾಸ ಬರೆಯುವ ಭೀತಿ ಎದುರಾಗಿದೆ.

1992ರಿಂದ ಭಾರತ 6 ಬಾರಿ ದಕ್ಷಿಣ ಆಫ್ರಿಕಕ್ಕೆ ಪ್ರವಾಸ ಕೈಗೊಂಡಿತ್ತು. ಸಚಿನ್ ತೆಂಡುಲ್ಕರ್ ನಾಯಕತ್ವದಲ್ಲಿ 1996-97ರಲ್ಲಿ ಮೂರು ಟೆಸ್ಟ್‌ಗಳ ಸರಣಿಯಲ್ಲಿ 2-0 ಅಂತರದಲ್ಲಿ ಸೋಲು ಅನುಭವಿಸಿರುವುದು ತಂಡದ ಈ ವರೆಗಿನ ಹೀನಾಯ ಸೋಲಾಗಿದೆ. 2006ರಿಂದ ಭಾರತ ಮೂರು ಬಾರಿ ಪ್ರವಾಸ ಕೈಗೊಂಡು ಆಫ್ರಿಕ ವಿರುದ್ಧ ಸರಣಿಯಲ್ಲಿ ಕನಿಷ್ಠ 1 ಜಯ ಅಥವಾ 1 ಟೆಸ್ಟ್‌ನಲ್ಲಿ ಡ್ರಾ ಸಾಧಿಸಿದ ದಾಖಲೆ ನಿರ್ಮಿಸಿತ್ತು. ಈ ಕಾರಣದಿಂದಾಗಿ ಭಾರತ ಉಳಿದಿರುವ ಒಂದು ಟೆಸ್ಟ್‌ನಲ್ಲಿ ಗೆಲ್ಲಲು ಅಥವಾ ಡ್ರಾ ಸಾಧಿಸಲು ಅವಕಾಶ ಇದೆ.

ಮೂರನೇ ಟೆಸ್ಟ್ ನಡೆಯಲಿರುವ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಭಾರತ ಈ ತನಕ ಸೋಲು ಅನುಭವಿಸಿಲ್ಲ. ಇಲ್ಲಿ 4 ಟೆಸ್ಟ್‌ಗಳನ್ನು ಭಾರತ ಆಡಿದೆ. ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ 2006ರಲ್ಲಿ ಭಾರತ ಜಯ ಗಳಿಸಿತ್ತು. ಎಸ್.ಶ್ರೀಶಾಂತ್ 99ಕ್ಕೆ 8 ವಿಕೆಟ್ ಉಡಾಯಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

11 ವರ್ಷಗಳ ಬಳಿಕ ಭಾರತ ಮತ್ತೊಮ್ಮೆ ಇಲ್ಲಿ ಗೆಲುವಿಗಾಗಿ ಪ್ರಯತ್ನ ನಡೆಸಲಿದೆ.ಆದರೆ ಭಾರತಕ್ಕೆ ಪರಿಸ್ಥಿತಿ ಇದೀಗ ಪ್ರತಿಕೂಲವಾಗಿದೆ. ಹುಲ್ಲು ಹಾಸಿನ ಕ್ರೀಡಾಂಗಣ ಉಭಯ ತಂಡಗಳನ್ನು ಸ್ವಾಗತಿಸಲು ಸಜ್ಜಾಗಿದೆ.

   ವಿರಾಟ್ ಕೊಹ್ಲಿ 34 ಟೆಸ್ಟ್‌ಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಆದರೆ ಅವರು ಪ್ರತಿಯೊಂದು ಪಂದ್ಯಗಳಿಗೂ ತಂಡದಲ್ಲಿ ಬದಲಾವಣೆ ಮಾಡಿದ್ದಾರೆ. ಈ ಕಾರಣದಿಂದಾಗಿ ಅಂತಿಮ ಟೆಸ್ಟ್‌ನಲ್ಲೂ ಬದಲಾವಣೆ ನಿರೀಕ್ಷಿತ. ಸೋಮವಾರ ಆರ್. ಅಶ್ವಿನ್ ಅವರು ಬ್ಯಾಟಿಂಗ್ ಅಭ್ಯಾಸ ನಡೆಸಲಿಲ್ಲ. ಆಲ್‌ರೌಂಡರ್ ರವೀಂದ್ರ ಜಡೇಜ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಅವರು ಫಿಟ್‌ನೆಸ್ ಸಮಸ್ಯೆಯಿಂದ ಹೊರ ಬಂದಿದ್ದಾರೆ. ಓರ್ವ ಸ್ಪಿನ್ನರ್‌ಗೆ ಅವಕಾಶ ನೀಡಲು ನಾಯಕ ಕೊಹ್ಲಿ ಬಯಸಿದರೆ ಜಡೇಜಗೆ ಅದೃಷ್ಟ ಖುಲಾಯಿಸಬಹುದು.

ಇದೇ ವೇಳೆ ಪಾರ್ಥಿವ್ ಪಟೇಲ್ ಕಳೆದ ಟೆಸ್ಟ್‌ನಲ್ಲಿ ವೈಫಲ್ಯ ಅನುಭವಿಸಿದ್ದಾರೆ, ಈ ಕಾರಣದಿಂದಾಗಿ ಅಂತಿಮ ಟೆಸ್ಟ್‌ನಲ್ಲಿ ಅವಕಾಶ ಪಡೆಯುವುದು ದೃಢಪಟ್ಟಿಲ್ಲ

  ಸರಣಿ ಗೆಲುವು ದಾಖಲಿಸಿರುವ ದಕ್ಷಿಣ ಆಫ್ರಿಕ ತಂಡ ಒತ್ತಡದಿಂದ ಪಾರಾಗಿದೆ. ಅಂತಿಮ ಹನ್ನೊಂದರ ಆಯ್ಕೆಗೆ ಭಾರತ ತಂಡಕ್ಕೆ ಎದುರಾಗಿರುವಂತೆ ಯಾವುದೇ ಸವಾಲು ಇಲ್ಲ. ಏಡೆನ್ ಮರ್ಕರಮ್ ಎರಡನೇ ಟೆಸ್ಟ್‌ನ ವೇಳೆ ಗಾಯಗೊಂಡಿದ್ದರು. ಅವರು ಚೇತರಿಸಿಕೊಂಡು ಅಂತಿಮ ಟೆಸ್ಟ್‌ಗೆ ಫಿಟ್ ಆಗಿದ್ದಾರೆ. ದಕ್ಷಿಣ ಆಫ್ರಿಕ ತಂಡಕ್ಕೆ ಆಸ್ಟ್ರೇಲಿಯದಲ್ಲಿ ಮುಂದೆ ಸರಣಿ ಇರುವ ಹಿನ್ನೆಲೆಯಲ್ಲಿ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಕೆಲವು ಯುವ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ನಾಯಕ ಎಫ್ ಡು ಪ್ಲೆಸಿಸ್ ಚಿಂತನೆ ನಡೆಸಿದ್ದಾರೆ.

ಕೈ ಬೆರಳಿಗೆ ಗಾಯವಾಗಿರುವ ಕಾರಣದಿಂದಾಗಿ ಬ್ಯಾಟ್ಸ್ ಮನ್ ಲಾಂಬಾ ಬವುಮಾ ಅಂತಿಮ ಪಂದ್ಯಕ್ಕೆ ಲಭ್ಯರಿಲ್ಲ. ಆಲ್‌ರೌಂಡರ್ ಕ್ರಿಸ್ ಮೋರಿಸ್ ಮತ್ತು ಥೆಯುನಿಸ್ ಡಿ ಬ್ರುಯೆನ್ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಭಾರತದ ವಿರುದ್ಧ 3-0 ಮತ್ತು ಆಸ್ಟ್ರೇಲಿಯದ ವಿರುದ್ಧ ಮುಂದೆ 3 ಟೆಸ್ಟ್‌ಗಳ ಸರಣಿಯಲ್ಲಿ 2-0 ಅಂತರದಲ್ಲಿ ಜಯ ಗಳಿಸಿದರೆ ದಕ್ಷಿಣ ಆಫ್ರಿಕ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆಯಲು ಅವಕಾಶ ಇದೆ.

►ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಮುರಳಿ ವಿಜಯ್, ಲೋಕೇಶ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ,ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮುಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಪಾರ್ಥಿವ್ ಪಟೇಲ್.

ದಕ್ಷಿಣ ಆಫ್ರಿಕ: ಎಫ್‌ಡು ಫ್ಲೆಸಿಸ್(ನಾಯಕ), ಡೇಲ್ ಎಲ್ಗರ್, ಏಡೆನ್ ಮರ್ಕರಮ್, ಹಾಶಿಮ್ ಅಮ್ಲ, ಥೆಯುನಿಸ್ ಡಿ ಬ್ರುಯೆನ್ ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಕೇಶವ್ ಮಹಾರಾಜ್, ಮೊರ್ನೆ ಮೊರ್ಕೆಲ್, ಕ್ರಿಸ್ ಮೋರಿಸ್, ವೆರ್ನಾನ್ ಫಿಲ್ಯಾಂಡರ್, ಕಾಗಿಸೊ ರಬಾಡ, ಆ್ಯಂಡಿಲ್ ಫೆಲುಕ್ವಾಯೊ, ಲುಂಗಿ ಗಿಡಿ, ಡುಯೆನ್ ಒಲಿವಿಯರ್.

►ಪಂದ್ಯದ ಸಮಯ: ಮಧ್ಯಾಹ್ನ 1:30ಕ್ಕೆ ಆರಂಭ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News