ಎಡ್ಮಂಡ್-ಸಿಲಿಕ್ ಸೆಮಿಫೈನಲ್ ಫೈಟ್

Update: 2018-01-23 18:47 GMT

ಮೆಲ್ಬೋರ್ನ್, ಜ.23: ಕೈಲ್ ಎಡ್ಮಂಡ್ ಹಾಗೂ ಮರಿನ್ ಸಿಲಿಕ್ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಸೆಣಸಾಡಲಿದ್ದಾರೆ. ವಿಶ್ವದ ನಂ.3ನೇ ಆಟಗಾರ ಗ್ರಿಗೊರ್ ಡಿಮಿಟ್ರೊವ್‌ರನ್ನು ಮಣಿಸಿದ ಕೈಲ್ ಎಡ್ಮಂಡ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮತ್ತೊಂದು ಪಂದ್ಯದಲ್ಲಿ 16 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ರಫೆಲ್ ನಡಾಲ್ ಗಾಯಗೊಂಡು ನಿವೃತ್ತಿಯಾದ ಕಾರಣ ಸಿಲಿಕ್ ಸೆಮಿ ಫೈನಲ್‌ಗೆತೇರ್ಗಡೆಯಾದರು. ಮಂಗಳವಾರ 2 ಗಂಟೆ, 49 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೇಯಾಂಕರಹಿತ ಎಡ್ಮಂಡ್ ಬಲ್ಗೇರಿಯದ ಡಿಮಿಟ್ರೊವ್‌ರನ್ನು 6-4, 3-6, 6-3, 6-4 ಸೆಟ್‌ಗಳಿಂದ ಮಣಿಸಿದರು. ಎಡ್ಮಂಡ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ-4ರ ಹಂತ ತಲುಪಿದ ಬ್ರಿಟನ್‌ನ ಆರನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಐದು ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿರುವ ಆ್ಯಂಡಿ ಮರ್ರೆ ಟೂರ್ನಿ ಆರಂಭಕ್ಕೆ ಮೊದಲೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಹಿನ್ನೆಲೆಯಲ್ಲಿ ಎಡ್ಮಂಡ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸ್ಪರ್ಧಿಸಿದ ಬ್ರಿಟನ್‌ನ ಏಕೈಕ ಆಟಗಾರನಾಗಿದ್ದರು.

ಡಿಮಿಟ್ರೊವ್ ಕಳೆದ ವರ್ಷ ಕೂಡ ಸೆಮಿಫೈನಲ್‌ನಲ್ಲಿ ನಡಾಲ್ ವಿರುದ್ಧ 5 ಸೆಟ್‌ಗಳಿಂದ ಸೋತಿದ್ದರು. ವಿಶ್ವದ ನಂ.3ನೇ ಆಟಗಾರನಾಗಿದ್ದರೂ ಈ ತನಕ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತ ದಾಟಿಲ್ಲ.

►ಸಿಲಿಕ್ ಸೆಮಿಗೆ: 

 ಪ್ರಶಸ್ತಿ ಫೇವರಿಟ್ ಹಾಗೂ ಅಗ್ರ ಶ್ರೇಯಾಂಕದ ನಡಾಲ್ ಗಾಯಗೊಂಡು ನಿವೃತ್ತಿಯಾದ ಹಿನ್ನೆಲೆಯಲ್ಲಿ ಸಿಲಿಕ್ ಸೆಮಿ ಫೈನಲ್‌ಗೆ ತಲುಪಿದ್ದಾರೆ. ನಡಾಲ್ ಕ್ವಾರ್ಟರ್ ಫೈನಲ್‌ನಿಂದ ಕಾಲಿಗೆ ಗಾಯವಾಗಿ ನಿವೃತ್ತಿಯಾಗುವ ಮೊದಲು 3-6, 6-3, 6-7(5), 6-2, 2-0 ಹಿನ್ನಡೆಯಲ್ಲಿದ್ದರು. ನಡಾಲ್ ನಾಲ್ಕನೇ ಸೆಟ್ ಆಡುವಾಗ ವೈದ್ಯಕೀಯ ಉಪಚಾರ ಪಡೆದರು. ನಡಾಲ್ ಐದನೇ ಸೆಟ್‌ನಲ್ಲಿ 0-2 ಹಿನ್ನಡೆಯಲ್ಲಿದ್ದಾಗ ಪಂದ್ಯದಿಂದ ನಿವೃತ್ತಿಯಾಗಲು ನಿರ್ಧರಿಸಿದರು. ಚೇರ್ ಅಂಪೈರ್ ಹಾಗೂ ಸಿಲಿಕ್ ಕೈಕುಲುಕಿ ಮೈದಾನವನ್ನು ತೊರೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News