ಮತದಾರರನ್ನು ಸೆಳೆಯಲು ಬಿಜೆಪಿಯ ಕೋಮು ದ್ವೇಷದ ಅಜೆಂಡಾ: ದಿನೇಶ್ ಗುಂಡೂರಾವ್
ಬೆಂಗಳೂರು, ಜ.24: ಅಭಿವೃದ್ಧಿಯ ವಿಚಾರ ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರಕಾರವನ್ನು ಏನೂ ಮಾಡಲು ಆಗುವುದಿಲ್ಲ. ಆದುದರಿಂದ, ಬಿಜೆಪಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೆ ಮತದಾರರನ್ನು ಸೆಳೆಯಲು ಕೋಮು ದ್ವೇಷದ ಅಜೆಂಡಾವನ್ನು ಪ್ರಾರಂಭಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರಾವಳಿ ಪ್ರದೇಶದಲ್ಲಿ ಸಾಧ್ಯವಾದಷ್ಟು ಹಿಂಸೆಗೆ ಪ್ರಚೋದನೆ ನೀಡುವುದು, ಶಾಂತಿ ಕದಡುವುದು, ಸಂವಿಧಾನಕ್ಕೆ ಅಗೌರವ ತೋರುವುದು ಮತ್ತು ವಿನಾಶಕಾರಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವುದನ್ನು ಮಾಡುತ್ತಿದೆ ಎಂದು ದೂರಿದರು.
ಯಾರು ಮೃತಪಟ್ಟರೂ ಅದನ್ನು ಸಮಾಜದೊಳಗೆ ಕೋಮು ದ್ವೇಷವನ್ನು ಹರಡಲು ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆಯನ್ನು ಎದುರಿಸುವ ಈ ಕ್ರಮಗಳು ಕೇವಲ ಶೋಚನೀಯವಾಗಿರದೆ ಬಹಳಷ್ಟು ವಿನಾಶಕಾರಿಯಾಗಿದ್ದು, ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಹಾಳು ಮಾಡುತ್ತಿದೆ ಎಂದು ಅವರು ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯದ ಬಿಜೆಪಿ ನಾಯಕರಿಗೆ ಎಲ್ಲೆಡೆ ಹಿಂಸೆ ಮತ್ತು ಗಲಭೆಗಳನ್ನು ಎಬ್ಬಿಸಲು ಹೇಳಿರುವುದಾಗಿ ಸಂಸದ ಪ್ರತಾಪ್ ಸಿಂಹ ಬಹಿರಂಗಪಡಿಸಿದ್ದಾರೆ. ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ, ‘ಮುಖ್ಯಮಂತ್ರಿಗೆ ಕಾದಿದೆ ಮಾರಿಹಬ್ಬ’, ‘ಹಿಂಸಾಚಾರದ ತಪರಾಕಿ ಸಾಕಾ ಅಥವಾ ಬೇಕಾ?’ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಅಲ್ಲದೆ, ಇತ್ತೀಚೆಗೆ ಕುವೆಂಪು ಅವರನ್ನು ನಿಂದಿಸಿದ್ದಾರೆ. ಅಲ್ಲದೆ ದಲಿತರನ್ನು ನಾಯಿಗಳಿಗೆ ಹೋಲಿಸಿ ಅವಮಾನ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ನಳಿನ್ ಕುಮಾರ್ ಕಟೀಲ್, ನಾವು ‘ಮಂಗಳೂರಿಗೆ ಬೆಂಕಿ ಹಚ್ಚುತ್ತೇವೆ’ ಎಂದು ಹೇಳುತ್ತಿದ್ದಾರೆ. ಇವರಿಗೆಲ್ಲಾ ಜವಾಬ್ದಾರಿ ಪ್ರಜ್ಞೆ ಇದೆಯೇ? ಸಮಾಜವನ್ನು ಒಡೆಯಲು ಮತ್ತು ಹಿಂಸೆಯನ್ನು ಪ್ರಚೋದಿಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬಹುದೇ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಕೊಲೆ ಪ್ರಕರಣಗಳ ಬಗ್ಗೆ ಬಿಜೆಪಿ ಶಾಸಕ ಸಿ.ಟಿ.ರವಿ ಸುಳ್ಳಿನ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ದ ದೂರು ದಾಖಲಾಗಿದೆ. ಇನ್ನು ಮುಂದೆ ಜಿಹಾದಿಗಳು ಅಂತಾ ಸುಳ್ಳು ಹೇಳಿದರೆ ಅವರ ವಿರುದ್ಧ ದೂರು ನೀಡಲಾಗುವುದು. ಸಾಮಾಜಿಕ ಜಾಲತಾಣದಲ್ಲಾಗಲಿ, ಬೇರೆ ಎಲ್ಲೇ ಮಾತನಾಡಲಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿಯವರು ಇತ್ತೀಚೆಗೆ ತಮ್ಮ ಸುಳ್ಳುಗಳ ಸಾಲಿಗೆ ಹೊಸ ಸುಳ್ಳೊಂದನ್ನು ಸೇರಿಸಿಕೊಂಡಿದ್ದು, ‘ಹಿಂದೂಗಳನ್ನು ಕೊಲ್ಲಲಾಗುತ್ತಿದ್ದರೂ ಸರಕಾರ ನೋಡಿಕೊಂಡು ಸುಮ್ಮನಿದೆ’ ಎಂದು ಹೇಳುತ್ತಿದ್ದಾರೆ. ಅದರಲ್ಲೂ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು 23 ಆರೆಸೆಸ್ಸ್, ಬಿಜೆಪಿ ಕಾರ್ಯಕರ್ತರನ್ನು ‘ಜಿಹಾದಿ ಶಕ್ತಿಗಳು’ ಕೊಲೆ ಮಾಡಿದ್ದು, ಈ ಬಗ್ಗೆ ಸರಕಾರ ಮೌನವಹಿಸಿದೆ ಎಂದು ಹೇಳಿದ್ದಾರೆ ಎಂದರು.
ಈ 23 ಪ್ರಕರಣಗಳಲ್ಲಿ 9 ಪ್ರಕರಣಗಳು ಮಾತ್ರ ಕೋಮುಗಲಭೆಯಿಂದ ಹತ್ಯೆಯಾಗಿದೆ. 2 ಆತ್ಮಹತ್ಯೆ ಪ್ರಕರಣ, 10 ಖಾಸಗಿ ವಿಚಾರಗಳಿಗೆ ಹತ್ಯೆಯಾಗಿದೆ. ಒಬ್ಬರು ಅಪಘಾತ ಪ್ರಕರಣದಲ್ಲಿ ಮೃತಪಟ್ಟಿದ್ದಾರೆ. 9 ಕೋಮುಗಲಭೆ ಪ್ರಕರಣಗಳಲ್ಲಿ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಯ ಕೈವಾಡವಿದೆ. ಎಲ್ಲ ಪ್ರಕರಣಗಳಲ್ಲಿ ಈಗಾಗಲೆ ಚಾರ್ಜ್‌ಶೀಟ್ ಹಾಗೂ ಎಫ್‌ಐಆರ್ ಹಾಕಲಾಗಿದೆ ಎಂದು ಅವರು ತಿರುಗೇಟು ನೀಡಿದರು.
ಕೇಂದ್ರ ಸರಕಾರ ಈ ಹತ್ಯೆ ಪ್ರಕರಣಗಳ ಕುರಿತು ಯಾವುದೆ ಸ್ಪಷ್ಟಣೆ ಕೇಳಿಲ್ಲ. ಆದರೂ, ಕೇಂದ್ರ ಸರಕಾರಕ್ಕೆ ನಾವು ಮಾಹಿತಿ ಕಳುಹಿಸಿಕೊಡುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೂ ಮಾಹಿತಿ ಕಳುಹಿಸಿಕೊಡಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಕರ್ನಾಟಕ ಬಂದ್ ಸಂದರ್ಭದಲ್ಲಿ ಯಾರೂ ಕೂಡ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಬಾರದು. ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ, ಕಾನೂನು ಸುವ್ಯವಸ್ಥೆಗೆ ಯಾರೂ ಧಕ್ಕೆ ತರಬಾರದು. 30 ಜಿಲ್ಲೆಗಳಲ್ಲೂ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು.
-ರಾಮಲಿಂಗಾರೆಡ್ಡಿ, ಗೃಹ ಸಚಿವ