ಜಲೀಲ್ ಕರೋಪಾಡಿ ಕೊಲೆ ಪ್ರಕರಣ: ದಿನೇಶ್‌ಶೆಟ್ಟಿ ಸೇರಿ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

Update: 2018-01-24 15:41 GMT

ಬೆಂಗಳೂರು, ಜ.24: ದಕ್ಷಿಣ ಕನ್ನಡ ಜಿಲ್ಲೆಯ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ನಿರೀಕ್ಷಣಾ ಜಾಮೀನು ಕೋರಿ ಪ್ರಕರಣದ ಆರೋಪಿಗಳಾದ ಪಿ.ದಿನೇಶ್ ಶೆಟ್ಟಿ, ವಿನೋದ್ ಕುಮಾರ್ ಶೆಟ್ಟಿ, ಪ್ರದೀಪ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು.

ಪ್ರಕರಣವೇನು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಅಬ್ದುಲ್ ಜಲೀಲ್ ಅವರನ್ನು 2017ರ ಎ.20ರಂದು ಕರೋಪಾಡಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕೊಲೆ ಮಾಡಲಾಗಿತ್ತು.

ಈ ಸಂಬಂಧ ಮೃತರ ಕುಟುಂಬದವರು ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದಾದ ಕೆಲ ದಿನಗಳ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ಜಲೀಲ್ ತಂದೆ ಉಸ್ಮಾನ್, ಮಗನ ಸಾವಿಗೆ ದಿನೇಶ್ ಶೆಟ್ಟಿ ಹಾಗೂ ಆತನ ಸಹಚರರು ಕಾರಣ ಎಂದು ಆರೋಪಿಸಿದ್ದರು.

ದಿನೇಶ್ ಶೆಟ್ಟಿ ಮತ್ತು ಅಬ್ದುಲ್ ಜಲೀಲ್ ಕರೋಪಾಡಿ ಗ್ರಾ.ಪಂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಜಲೀಲ್ ಜಯಗಳಿಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆಯೂ ವೈಮನಸ್ಸು ಮೂಡಿತ್ತು. ಬಳಿಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮರಳು ಗಣಿಕಾರಿಕೆ ನಡೆಸಲು ದಿನೇಶ್ ಶೆಟ್ಟಿ ಕೋರಿದ್ದ ಮನವಿಯನ್ನು ಜಲೀಲ್ ತಿರಸ್ಕರಿಸಿದ್ದರು. ಈ ದ್ವೇಷಕ್ಕಾಗಿ ದಿನೇಶ್ ಶೆಟ್ಟಿ ಸುಪಾರಿ ನೀಡಿ ಜಲೀಲ್ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ದಿನೇಶ್ ಶೆಟ್ಟಿ ಹಾಗೂ ಇತರರನ್ನು ಆರೋಪಿಗಳನ್ನಾಗಿ ಗುರುತಿಸಿದ್ದ ಪೊಲೀಸರು ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News