ಮೊದಲ ಪಂದ್ಯದಲ್ಲಿ ಭಾರತ ಜಯಭೇರಿ

Update: 2018-01-24 18:43 GMT

ಹ್ಯಾಮಿಲ್ಟನ್, ಜ.24: ಎರಡನೇ ಹಂತದ ಚತುರ್ರಾಷ್ಟ್ರ ಆಹ್ವಾನಿತ ಹಾಕಿ ಟೂರ್ನಮೆಂಟ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ಆತಿಥೇಯ ನ್ಯೂಝಿಲೆಂಡ್ ವಿರುದ್ಧ 3-2 ಅಂತರದಿಂದ ಜಯ ಸಾಧಿಸಿದೆ.

 ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಲಲಿತ್ ಉಪಾಧ್ಯಾಯ(7ನೇ ನಿಮಿಷ), ಹರ್ಜೀತ್ ಸಿಂಗ್(32ನೇ ನಿ.) ಹಾಗೂ ರೂಪಿಂದರ್ ಪಾಲ್ ಸಿಂಗ್(36ನೇ ನಿ.)ಭಾರತದ ಪರ ತಲಾ ಒಂದು ಗೋಲು ಬಾರಿಸಿದರು. ನ್ಯೂಝಿಲೆಂಡ್‌ನ ಪರ ಡೇನಿಯಲ್ ಹ್ಯಾರಿಸ್(23ನೇ ನಿ.) ಹಾಗೂ ಕೇನ್ ರಸ್ಸಲ್(37ನೇ ನಿ)ತಲಾ ಒಂದು ಗೋಲು ಬಾರಿಸಿದರು.

7ನೇ ನಿಮಿಷದಲ್ಲಿ ಗೋಲು ಬಾರಿಸಿದ ಲಲಿತ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಎರಡನೇ ಕ್ವಾರ್ಟರ್‌ನಲ್ಲಿ ನ್ಯೂಝಿಲೆಂಡ್ ಮರು ಹೋರಾಟ ನಡೆಸಿದ್ದು, ಭಾರತದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಗೋಲು ತಡೆಯುವುದರಲ್ಲಿ ನಿರತರಾದರು. 23ನೇ ನಿಮಿಷದಲ್ಲಿ ಗೋಲು ಬಾರಿಸಿದ ಡೇನಿಯಲ್ ಹ್ಯಾರಿಸ್ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು. 32ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದ ಹರ್ಜೀತ್ ಭಾರತಕ್ಕೆ 2-1 ರಿಂದ ಮುನ್ನಡೆ ಒದಗಿಸಿಕೊಟ್ಟರು. ಭಾರತ 36ನೇ ನಿಮಿಷದಲ್ಲಿ ಎರಡನೇ ಪೆನಾಲ್ಟಿಕಾರ್ನರ್ ಅವಕಾಶ ಪಡೆದಿದ್ದು ರೂಪಿಂದರ್ ಪಾಲ್ ಸಿಂಗ್ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ 3-1 ಮುನ್ನಡೆ ಒದಗಿಸಿಕೊಟ್ಟರು. 37ನೇ ನಿಮಿಷದಲ್ಲಿ ನ್ಯೂಝಿಲೆಂಡ್ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದು ರಸ್ಸಲ್ ಇದನ್ನು ಗೋಲಾಗಿ ಪರಿವರ್ತಿಸಲು ಸಫಲರಾದರು. ಕಿವೀಸ್ ಕೊನೆಯ ಕ್ವಾರ್ಟರ್‌ನಲ್ಲಿ ಸಮಬಲ ಸಾಧಿಸಲು ತೀವ್ರ ಪ್ರಯತ್ನ ನಡೆಸಿತು. ಭಾರತದ ಡಿಫೆನ್ಸ್ ಆಟಗಾರರು ಕಿವೀಸ್‌ಗೆ ತಡೆಯಾದರು.

ಭಾರತ ತನ್ನ ಎರಡನೇ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News