ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ದೇವೇಗೌಡರಿಗೆ ಸಚಿವ ಎ ಮಂಜು ತಿರುಗೇಟು ನೀಡಿ ಹೇಳಿದ್ದೇನು ?

Update: 2018-01-25 14:56 GMT

ಬೆಂಗಳೂರು, ಜ. 25: ತನ್ನ ವಿರುದ್ಧ ಕಮಿಷನ್ ಹೊಡೆದಿದ್ದಾರೆಂಬ ಆರೋಪ ಮಾಡುವವರಂತೆ ನಾನು 7ನೆ ತರಗತಿಯನ್ನು ಏಳೇಳು ಬಾರಿ ಬರೆದು ಪಾಸ್ ಆದವನಲ್ಲ. ಎರಡೆರಡು ಪದವಿ ಪಡೆದಿದ್ದು, ಅವರಂತೆ ತಾನು ಯಾರದೋ ಕೃಪಾಕಟಾಕ್ಷದಿಂದ ಮಂತ್ರಿಯಾಗಿಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಮಾಜಿ ಪ್ರಧಾನಿ ದೇವೇಗೌಡರಿಗೆ ತಿರುಗೇಟು ನೀಡಿದ್ದಾರೆ.

ಗುರುವಾರ ಇಲ್ಲಿನ ಶಕ್ತಿಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರು ಸೋತು ಮನೆಯಲ್ಲಿ ಕುಳಿತಿದ್ದ ವೇಳೆ ನನ್ನ ಹತ್ತಿರ ಸಹಾಯ ಕೇಳಿಕೊಂಡು ಬಂದಿದ್ದರು. ಅವರು ಯಾರ ಸಹಾಯದಿಂದ ಸಂಸದರಾಗಿದ್ದು ಎಂಬುದನ್ನು ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರಿಗೆ ಪ್ರಧಾನಿ ಸ್ಥಾನ ನೀಡಿದ್ದು, ಕಾಂಗ್ರೆಸ್ ಪಕ್ಷ. ನಾನು ಅವರ ಹಂಗಿನಲ್ಲಿಲ್ಲ. ನನ್ನ ಹಂಗಿನಲ್ಲಿ ಅವರು ಇದ್ದಾರೆ. ದೇವೇಗೌಡರು ಮೊದಲು ತಮ್ಮ ಮಕ್ಕಳ ಮೇಲಿನ ವ್ಯಾಮೋಹ ಬಿಡಬೇಕು. ಅವರಿಗೆ ವಯಸ್ಸಾಗಿದೆ, ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹಾಸನ ಜಿಲ್ಲಾಧಿಕಾರಿ ವರ್ಗಾವಣೆ ಏಕೆ ಮಾಡಿದ್ದು ಎಂಬುದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಎಷ್ಟು ಅಧಿಕಾರಿಗಳು ಬೇಕು, ಯಾವ್ಯಾವ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅಂತ ದೇವೇಗೌಡರು, ಮುಖ್ಯಮಂತ್ರಿಗೆ ಪತ್ರ ಬರೆದಿಲ್ಲವೇ? ಅದನ್ನು ಹೇಳಬೇಕೆ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅಧಿಕಾರಿಗಳ ವರ್ಗಾವಣೆಗೆ ಒತ್ತಡ ಹೇರುವುದು ದೇವೇಗೌಡರ ಜಾಯಮಾನ. ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಅವರ ಸೊಸೆಗೆ ಸಿಗಲಿಲ್ಲ ಅಂತ ಅವರಿಗೆ ಹೊಟ್ಟೆಯುರಿ ಎಂದು ಮಂಜು ಇದೇ ವೇಳೆ ಹೇಳಿದರು.

ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ ಬದಲಿಗೆ ಅದರದ್ದೇ ಅಂಗಸಂಸ್ಥೆಯಾದ ಕೆಆರ್‌ಡಿಸಿಎಂಗೆ ವಹಿಸಲಾಗಿದೆ ಎಂದ ಅವರು, ಕಮಿಷನ್ ಪಡೆದಿದ್ದಾರೆಂದು ಆರೋಪ ಮಾಡಿರುವುದು ನನಗೆ ನೋವಾಗಿದೆ ಎಂದರು.

                                                                                   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News