ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ: ಮೇಜರ್ ಸಂಜಯ್‌ಸೋಯ್

Update: 2018-01-26 15:45 GMT

ಬೆಳಗಾವಿ, ಜ.26: ವಿಶ್ವವೇ ಬೆರಗಾಗುವಂತಹ ಪ್ರಜಾರಾಜ್ಯವನ್ನು ಅಳವಡಿಸಿಕೊಂಡಿರುವ ಭಾರತವು ಇಂದು ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಎಂಎಲ್‌ಐಆರ್‌ಸಿಯ ಜ್ಯೂನಿಯರ್ ಲೀಡರ್ ವಿಂಗ್‌ನ ಮೇಜರ್ ಜರ್ನಲ್ ಸಂಜಯ್‌ಸೋಯ್ ಹೇಳಿದ್ದಾರೆ.

ಶುಕ್ರವಾರ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಪ್ರಜಾಪ್ರಭುತ್ವವೇ ಮುಖ್ಯ. ಶಿಕ್ಷಣವು ಇಂದು ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದರು.

ಅನಕ್ಷರತೆಯನ್ನು ಹೋಗಲಾಡಿಸುತ್ತ ಮಹಿಳೆಯರ ಹಕ್ಕುಗಳನ್ನು ರಕ್ಷಿಸಿ ಅವರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಮಾನತೆಗಾಗಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಮುಂದುವರೆದ ರಾಷ್ಟ್ರಗಳಂತೆ ಭಾರತವು ಪ್ರಬಲ ಮಿಲಿಟರಿ ರಾಷ್ಟ್ರವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು.

ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಮೂಲಕ ಅತ್ಯಂತ ಬಲಿಷ್ಠ ರಾಷ್ಟ್ರದತ್ತ ದಾಪುಗಾಲು ಇಡುತ್ತಿದೆ. ದೇಶವನ್ನು ಸಶಕ್ತ ರಾಷ್ಟ್ರವನ್ನಾಗಿ ಮಾರ್ಪಡಿಸುವಲ್ಲಿ ಸಕಲರ ಪಾತ್ರ ಮುಖ್ಯವಾಗಿದೆ ಎಂದು ಸಂಜಯ್ ಸೋಯ್ ತಿಳಿಸಿದರು.

ಎಲ್ಲ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡು, ಅತ್ಯಾಧುನಿಕ ಸಾಮಗ್ರಿಗಳೊಂದಿಗೆ ಸದಾ ಸನ್ನದ್ಧವಾಗಿರಬೇಕಾಗಿದೆ. ಇಂದು ವೈದ್ಯಕೀಯ ಕ್ಷೇತ್ರವೂ ಭಾರತದಲ್ಲಿ ತೀವ್ರ ಆವಿಷ್ಕಾರಗಳೊಂದಿಗೆ ಬೆಳೆಯುತ್ತಿದೆ. ಇದು ದೇಶದ ಆರೋಗ್ಯವನ್ನು ಕಾಪಾಡಲು ಬಹಳಷ್ಟು ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸೈನಿಕರು ತಮ್ಮ ಕುಟುಂಬವನ್ನು ಬಿಟ್ಟು ದೇಶದ ರಕ್ಷಣೆಯಲ್ಲಿ ನಿರತರಾಗಿದ್ದಾರೆ. ಅವರ ಜೀವನ ಕಠಿಣ, ಆದರೂ ಎಲ್ಲವನ್ನು ತ್ಯಜಿಸಿ ದೇಶ ಸೇವೆಯಲ್ಲಿ ನಿರತರಾಗಿದ್ದಾರೆ. ಅವರನ್ನು ಸದಾ ಗೌರವಿಸಿ ಎಂದ ಅವರು, ಬೆಳಗಾವಿಯಲ್ಲಿ ನೆಲೆಗೊಂಡಿರುವ ಕೆಎಲ್‌ಇ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಯಾದ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಕಾರ್ಯವನ್ನು ಶ್ಲಾಘಿಸಿದರು.

ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಪತಿ ಡಾ.ವಿವೇಕ ಸಾವೋಜಿ ಮಾತನಾಡಿ, ರಾಷ್ಟ್ರೀಯದಿನಾಚರಣೆಗಳು ದೇಶದ ಬಲಿಷ್ಠತೆ, ಸಂಬಂಧ ಮತ್ತು ರಾಷ್ಟ್ರೀಯತೆಯನ್ನು ಬಿಂಬಿಸುವ ದಿನಗಳನ್ನು ನಾವು ಸದಾ ಸ್ಮರಿಸಬೇಕು ಎಂದರು.

ನಾವು ಮಾಡುವ ಕಾರ್ಯಗಳು ದೇಶದ ಸಮಗ್ರತೆ ಮತ್ತು ಅಖಂಡ ಭಾರತವನ್ನು ಪ್ರದರ್ಶಿಸಬೇಕು. ಆಸ್ಪತ್ರೆಯಲ್ಲಿ ಶೀಘ್ರದಲ್ಲಿಯೇ ದೇಹದ ಎಲ್ಲ ಅಂಗಾಂಗಗಳ ಕಸಿ ವಿಧಾನವನ್ನು ಪ್ರಾರಂಭಿಸಲಾಗುತ್ತಿದೆ. ಈಗಾಗಲೆ ಕಿಡ್ನಿ ಕಸಿ ನಡೆಯುತ್ತಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಕಾರ್ಯ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಆಸ್ಪತ್ರೆಯು ಪ್ರಕಟಿಸುವ ಲೈಫ್ ಲೈನ್ ಅನ್ನು ಮೇ.ಜ. ಸಂಜಯ್ ಸೋಯ್, ಮಧುಮೇಹ ವೈದ್ಯವನ್ನು ಡಾ.ವಿವೇಕ ಸಾವೋಜಿ ಹಾಗೂ ಫೋಕಸ್ ಅನ್ನು ಕುಲಸಚಿವ ಡಾ.ಡಿ.ಪಾಟೀಲ್ ಬಿಡುಗಡೆ ಮಾಡಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಸ್ವಾಗತಿಸಿದರು. ವೇದಿಕೆಯಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎನ್.ಎಸ್.ಮಹಾಂಶೆಟ್ಟಿ, ಆರತಿ ಸಂಜಯ್ ಸೋಯ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News