ಉತ್ತರ ಪ್ರದೇಶದಲ್ಲಿ ಪಠ್ಯಗಳ ಜೊತೆಗೆ ಸ್ಪರ್ಧೆಗಳ ಕೇಸರೀಕರಣ!

Update: 2018-01-27 04:34 GMT

ಲಕ್ನೋ, ಜ. 27: ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ, ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಕೇಸರೀಕರಣಕ್ಕೆ ಮುಂದಾಗಿದೆ. ಪಠ್ಯಕ್ರಮದ ಜತೆಗೆ ವಿದ್ಯಾರ್ಥಿಗಳಿಗೆ ಏರ್ಪಡಿಸುವ ಸ್ಪರ್ಧೆಗಳಲ್ಲಿ ಕೂಡಾ ಕೇಸರಿ ಛಾಯೆ ದಟ್ಟವಾಗಿದೆ.

ಬಿಜೆಪಿ ಹಾಗೂ ಸಂಘ ಪರಿವಾರದ ಬಣ್ಣ ಎಂದೇ ಬಿಂಬಿತವಾಗಿರುವ ಕೇಸರಿಯ ದಟ್ಟ ಛಾಯೆ ಶಿಕ್ಷಣ ಕ್ಷೇತ್ರವನ್ನು ಆವರಿಸಿದೆ. ಕಳೆದ ಆಗಸ್ಟ್‌ನಲ್ಲಿ ಉತ್ತರ ಪ್ರದೇಶದ ಶಾಲೆಗಳಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲೇ ಇದು ಸ್ಪಷ್ಟವಾಗಿತ್ತು. ಪಂಡಿತ್ ದೀನ್‌ ದಯಾಳ್ ಉಪಾಧ್ಯಾಯ ಅವರ 100ನೆ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಆಯೋಜಿಸಲಾಗಿತ್ತು.

ಇದಾದ ಬಳಿಕ ಡಿಸೆಂಬರ್‌ನಲ್ಲಿ ರಾಜ್ಯಾದ್ಯಂತ ಶಾಲೆಗಳಲ್ಲಿ ಶ್ರೀಮದ್‌ ಭಗವದ್ಗೀತಾ ರಹಸ್ಯ ಆಧರಿತ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು. ಆದಿತ್ಯನಾಥ್ ಪ್ರತಿನಿಧಿಸುವ ಗೋರಖ್‌ಪುರ ಕ್ಷೇತ್ರದ ಬಾಲಕ ಇದರಲ್ಲಿ ವಿಜೇತನಾಗಿದ್ದ. ಮೀರಠ್‌ನ ಅಲಿಯಾ ಖಾನ್ ದ್ವಿತೀಯ ಸ್ಥಾನಿಯಾಗಿ, ಕ್ರಮವಾಗಿ 50 ಸಾವಿರ ಹಾಗೂ 25 ಸಾವಿರದ ಚೆಕ್ಕುಗಳನ್ನು ಬಹುಮಾನವಾಗಿ ಪಡೆದಿದ್ದರು.

ಶ್ರೀಮದ್‌ ಭಗವದ್ಗೀತಾ ರಹಸ್ಯ ಎನ್ನುವುದು ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಹಿಂದೂ ಗ್ರಂಥಗಳ ಬಗೆಗೆ ಬರೆದ ಕೃತಿಯಾಗಿದೆ. "ಶಾಲೆಗಳಲ್ಲಿ ರಸಪ್ರಶ್ನೆ ಆಯೋಜಿಸುವುದು ಉತ್ತಮ ಬೆಳವಣಿಗೆ. ಆದರೆ ಕೇವಲ ಭಗವದ್ಗೀತೆ ಆಧರಿತ ಕ್ವಿಜ್ ನಡೆಯಬಾರದು" ಎನ್ನುವುದು ಇತಿಹಾಸಕಾರ ರಾಣಾ ಸಫ್ವಿ ಅವರ ಅಭಿಮತ. ಇದು ನಮ್ಮ ವೈಭವದ ಇತಿಹಾಸವನ್ನು ಆಧರಿಸಿರಬೇಕು ಎನ್ನುವುದು ಅವರ ಸಲಹೆ.

ರಾಜ್ಯ ಸರ್ಕಾರ ಡಿಸೆಂಬರ್ ಒಂದರಂದು ಆದೇಶ ನೀಡಿ, ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಉಪಾಧ್ಯಾಯ ಹೆಸರಿನ ಪೀಠಗಳನ್ನು ಸ್ಥಾಪಿಸಲು ಸೂಚಿಸಿದೆ. ದೀನ್‌ದಯಾಳ್ ಅವರ ಸಿದ್ಧಾಂತವನ್ನು ಕಾರ್ಯಾಗಾರ ಹಾಗೂ ವಿಚಾರಸಂಕಿರಣಗಳ ಮೂಲಕ ಪ್ರಚುರಪಡಿಸಲು 14 ವಿಶ್ವ ವಿದ್ಯಾನಿಲಯಗಳಿಗೆ 7 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದೆ.

ಸರ್ಕಾರದ ಈ ನಿರ್ಧಾರಕ್ಕೂ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ವಿಶ್ವವಿದ್ಯಾನಿಲಯಗಳಲ್ಲಿ ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಅಥವಾ ಹೋಮಿ ಜಹಾಂಗೀರ್ ಭಾಭಾ ಅವರ ಹೆಸರಿನಲ್ಲಿ ಪೀಠ ಸ್ಥಾಪಿಸುವ ಬದಲು ಉಪಾಧ್ಯಾಯ ಪೀಠವನ್ನೇಕೆ ಸ್ಥಾಪಿಸಬೇಕು ಎನ್ನುವುದು ಚಿತ್ರ ನಿರ್ಮಾಪಕ- ಲೇಖಕ ಸೊಹೈಲ್ ಹಶ್ಮಿ ಅವರ ಪ್ರಶ್ನೆ.

ಶಿಕ್ಷಣ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಪದೇ ಪದೇ ವಿದ್ಯಾರ್ಥಿಗಳಿಗೆ ಸರಿಯಾದ ಇತಿಹಾಸ ಬೋಧಿಸುವ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಿದ್ದು, ಕೇಸರಿ ಸಿದ್ಧಾಂತಕ್ಕೆ ಒಗ್ಗುವಂಥ ರೀತಿಯಲ್ಲಿ ಇತಿಹಾಸದ ಮರುವ್ಯಾಖ್ಯಾನಕ್ಕೆ ಸರ್ಕಾರ ಮುಂದಾಗಿದೆ ಎಂಬ ಭೀತಿ ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News