ಟ್ರಂಪ್ ಜೊತೆ ಅಕ್ರಮ ಸಂಬಂಧ ವದಂತಿ: ನಿಕ್ಕಿ ಹ್ಯಾಲೆ ಹೇಳಿದ್ದೇನು?

Update: 2018-01-27 16:27 GMT

ವಾಷಿಂಗ್ಟನ್,ಜ.27 : ತಮ್ಮ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಅಕ್ರಮ ಸಂಬಂಧವಿದೆಯೆಂಬ ಆರೋಪಗಳನ್ನು ವಿಶ್ವಸಂಸ್ಥೆಯಲ್ಲಿನ ಅಮೆರಿಕಾ ರಾಯಭಾರಿ ನಿಕ್ಕಿ ಹ್ಯಾಲೆ ನಿರಾಕರಿಸಿದ್ದಾರೆ.

ದಕ್ಷಿಣ ಕ್ಯಾರೊಲಿನಾದ ಮಾಜಿ ಗವರ್ನರ್ ಕೂಡ ಆಗಿರುವ ನಿಕ್ಕಿ ಅವರು ಈ ವದಂತಿಗಳನ್ನು ಅವಮಾನಕಾರಿ ಮತ್ತು ಅಸಹ್ಯಕರ ಎಂದು ಬಣ್ಣಿಸಿದ್ದಾರೆ. ಪತ್ರಕರ್ತ ಮೈಖೇಲ್ ವುಲ್ಫ್ ಅವರ ಕೃತಿ ‘ಫೈರ್ ಎಂಡ್ ಫ್ಯೂರಿ' ಪ್ರಕಟಗೊಂಡ ನಂತರ ಈ ವಿವಾದ ಆನ್‍ಲೈನ್ ಮೂಲಕ ಹರಡಿತ್ತು. ಕಳೆದ ವಾರ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೈಖೇಲ್,  ಟ್ರಂಪ್ ಅವರು ನಿಕ್ಕಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂಬುದು ಖಂಡಿತವಾಗಿಯೂ ನಿಜ ಎಂದು ಹೇಳಿದ್ದರು.

ಆದರೆ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ನಿಕ್ಕಿ, ಇದು ಖಂಡಿತವಾಗಿಯೂ ನಿಜವಲ್ಲ ಎಂದಿದ್ದಾರೆ. “ಅಧ್ಯಕ್ಷರು ಸಾಕಷ್ಟು ಖಾಸಗಿ ಸಮಯವನ್ನು ನಿಕ್ಕಿ ಹ್ಯಾಲೆ ಅವರೊಂದಿಗೆ ಏರ್ ಫೋರ್ಸ್ ಒನ್  ಇದರಲ್ಲಿ ಕಳೆದಿದ್ದಾರೆ'' ಎಂದು ತಮ್ಮ ಕೃತಿಯಲ್ಲಿ ವುಲ್ಫ್ ಅವರು  ಹೇಳಿದ್ದರೆ  ತಾವು ಏರ್ ಫೋರ್ಸ್ ಒನ್ ಗೆ ಒಮ್ಮೆ ಮಾತ್ರ ಹೋಗಿದ್ದು ಆಗ ಕೊಠಡಿಯಲ್ಲಿ  ತಾವು ಮಾತ್ರವಲ್ಲದೆ ಹಲವು ಮಂದಿ ಇತರರು ಇದ್ದರೆಂದು  ನಿಕ್ಕಿ ಹೇಳಿಕೊಂಡಿದ್ದಾರೆ.

46 ವರ್ಷದ ನಿಕ್ಕಿ ಹ್ಯಾಲೆ ವಿವಾಹಿತರಾಗಿದ್ದು ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ದಕ್ಷಿಣ ಕ್ಯಾರೊಲಿನಾದ ಪ್ರಥಮ ಮಹಿಳಾ ಗರ್ವನರ್ ಆಕೆ ಆಗಿದ್ದರಲ್ಲದೆ ಅಮೆರಿಕಾದ ಇತಿಹಾಸದಲ್ಲಿಯೇ ಎರಡನೇ ಭಾರತೀಯ-ಅಮೆರಿಕನ್ ಗರ್ವನರ್ ಆಗಿದ್ದರು.

ಟ್ರಂಪ್ ಅವರು ವಿವಾಹೇತರ ಸಂಬಂಧ ಹೊಂದಿದ್ದಾರೆಂಬ ಆರೋಪ ಕೇಳಿ ಬಂದಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ನೀಲಿಚಿತ್ರ ನಟಿ ಸ್ಟೆಫಾನೀ ಕ್ಲಿಫಡ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು ಮೆಲಾನಿಯಾ ಅವರನ್ನು ವಿವಾಹವಾದ ಅಲ್ಪ ಸಮಯದಲ್ಲಿಯೇ ತಮ್ಮ ಹಾಗೂ ಟ್ರಂಪ್ ನಡುವೆ ಸಂಬಂಧವಿತ್ತೆಂದು ಹೇಳಿಕೊಂಡಿದ್ದರು. ಆದರೆ ಟ್ರಂಪ್ ಅವರ ವಕೀಲರು ಇದು ಸುಳ್ಳೆಂದು ವಾದಿಸಿದ್ದರು.

ಏರ್‌ಫೋರ್ಸ್ ವನ್ ವಿಮಾನದಲ್ಲಿ ಒಮ್ಮೆ ಮಾತ್ರ ಇದ್ದೆ

ತಾನು ತನ್ನ ಹೆಚ್ಚಿನ ವೈಯಕ್ತಿಕ ಸಮಯವನ್ನು ಅಧ್ಯಕ್ಷರೊಂದಿಗೆ ಅವರ ಏರ್ ಫೋರ್ಸ್ ವನ್ ವಿಮಾನದಲ್ಲಿ ಮತ್ತು ಓವಲ್ ಕಚೇರಿಯಲ್ಲಿ ಕಳೆಯುತ್ತೇನೆ ಎಂಬುದಾಗಿ ವುಲ್ಫ್ ತನ್ನ ಪುಸ್ತಕದಲ್ಲಿ ಬರೆದಿರುವುದಕ್ಕೆ ಹೇಲಿ ತಕರಾರು ವ್ಯಕ್ತಪಡಿಸಿದರು.

‘‘ನಾನು ಏರ್‌ಫೋರ್ಸ್ ವನ್ ವಿಮಾನದಲ್ಲಿ ಒಮ್ಮೆ ಮಾತ್ರ ಇದ್ದೆ. ನಾನಿದ್ದ ಸಮಯದಲ್ಲಿ ಆ ಕೋಣೆಯಲ್ಲಿ ಬೇರೆಯವರೂ ಇದ್ದರು’’ ಎಂದರು.

‘‘ನಾನು ನನ್ನ ರಾಜಕೀಯ ಭವಿಷ್ಯದ ಬಗ್ಗೆ ಓವಲ್ ಕಚೇರಿಯಲ್ಲಿ ಅಧ್ಯಕ್ಷರೊಂದಿಗೆ ತುಂಬಾ ಮಾತನಾಡುತ್ತೇನೆ ಎಂದು ಅವರು ಬರೆಯುತ್ತಾರೆ. ನನ್ನ ಭವಿಷ್ಯದ ಬಗ್ಗೆ ಅಧ್ಯಕ್ಷರೊಂದಿಗೆ ಒಮ್ಮೆಯೂ ಮಾತನಾಡಿಲ್ಲ ಹಾಗೂ ನಾನು ಅವರೊಂದಿಗೆ ಯಾವತ್ತೂ ಒಂಟಿಯಾಗಿ ಇರಲಿಲ್ಲ’’ ಎಂದು ಹೇಲಿ ನುಡಿದರು.

ಇದು ಮಹಿಳಾ ದ್ವೇಷಿಗಳ ಕೆಲಸ

ಕೆಲವೇ ಕೆಲವು ಪುರುಷರ ಲಿಂಗತಾರತಮ್ಯವಾದಿ ಮನೋಭಾವದಿಂದಾಗಿ ಈ ರೀತಿಯ ಊಹಾಪೋಹಗಳು ಹಬ್ಬಿವೆ; ಅವರಿಗೆ ದೃಢ ನಿರ್ಧಾರದ ಮಹಿಳೆಯರನ್ನು ಕಂಡರೆ ಆಗುವುದಿಲ್ಲ ಎಂದು ನಿಕ್ಕಿ ಹೇಲಿ ಆರೋಪಿಸಿದರು.

‘‘ಹೆಚ್ಚಿನ ಪುರುಷರು ಮಹಿಳೆಯರನ್ನು ಗೌರವಿಸುತ್ತಾರೆ. ಆದರೆ, ಕೆಲವೇ ಪುರುಷರ ಸಣ್ಣ ಗುಂಪೊಂದಿದೆ. ನೀವು ನಿಮ್ಮಷ್ಟಕ್ಕೆ ನಿಮ್ಮ ಕೆಲಸವನ್ನು ಮಾಡಿದರೆ ಹಾಗೂ ನೀವು ಅದನ್ನು ಚೆನ್ನಾಗಿ ಮಾಡಿದರೆ ಹಾಗೂ ನಿಮ್ಮನ್ನು ನೀವು ಗಟ್ಟಿಯಾಗಿ ಸಮರ್ಥಿಸಿಕೊಂಡರೆ ಅವರಿಗೆ ಆಗುವುದಿಲ್ಲ. ನಿಮ್ಮನ್ನು ಪದಚ್ಯುತಗೊಳಿಸುವುದೇ ಏಕೈಕ ಆಯ್ಕೆ ಎಂಬುದಾಗಿ ಅವರು ಭಾವಿಸುತ್ತಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News