ಮಹಾದಾಯಿ ವಿಚಾರದಲ್ಲಿ ಆಟ ಆಡುತ್ತಿರುವುದು ನಾವಲ್ಲ, ಬಿಜೆಪಿ ಮತ್ತು ಯಡಿಯೂರಪ್ಪ: ಸಿದ್ದರಾಮಯ್ಯ
Update: 2018-01-28 14:16 IST
ಬೆಂಗಳೂರು, ಜ.28: ಮಹಾದಾಯಿ ವಿಚಾರದಲ್ಲಿ ಆಟ ಆಡುತ್ತಿರುವುದು ಬಿಜೆಪಿ ಮತ್ತು ಆ ಪಕ್ಷದ ನಾಯಕ ಯಡಿಯೂರಪ್ಪ ಅವರೇ ಹೊರತು ನಾವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಒಂದು ತಿಂಗಳಲ್ಲಿ ಮಹಾದಾಯಿ ನದಿ ಹರಿಸುವುದಾಗಿ ಹೇಳಿದ್ದು ಯಾರು? ಯಡಿಯೂರಪ್ಪ ಅವರಲ್ಲವೇ ? ಈಗ ಅವರು ಮಾತು ತಪ್ಪಿಲ್ಲವೇ ಎಂದು ಪ್ರಶ್ನಿಸಿದರು.
ಮಹಾದಾಯಿ ವಿಚಾರವಾಗಿ ಚರ್ಚಿಸಲು ನಿನ್ನೆ ಸರ್ವಪಕ್ಷ ನಾಯಕರು ಹಾಗೂ ರೈತರ ಮುಖಂಡರ ಸಭೆ ಕರೆಯಲಾಗಿತ್ತು. ಆ ಸಭೆ ವಿಫಲವಾಗಿಲ್ಲ. ವಿವಾದ ಇತ್ಯರ್ಥಕ್ಕೆ ಮಧ್ಯೆ ಪ್ರವೇಶಿಸುವಂತೆ ಪ್ರಧಾನಿಯವರ ಮನವೊಲಿಸಬೇಕು. ಇದಕ್ಕಾಗಿ ಪ್ರಧಾನಿಯವರ ಬಳಿಗೆ ಸರ್ವಪಕ್ಷ ಹಾಗೂ ರೈತ ಮುಖಂಡರ ನಿಯೋಗ ಕರೆದೊಯ್ಯಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಅದರಂತೆ ಪ್ರಧಾನಿಯವರಿಗೆ ಪತ್ರ ಬರೆದು ನಿಯೋಗದೊಂದಿಗೆ ಭೇಟಿ ಮಾಡಲು ಸಮಯ ಕೋರುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.