ಕದ್ದು ಬರುವ ಅಗತ್ಯವೇನಿತ್ತು: ಸಚಿವ ಎಂ.ಬಿ.ಪಾಟೀಲ್

Update: 2018-01-28 11:31 GMT

ಬಾಗಲಕೋಟೆ, ಜ. 28: ಗೋವಾ ಸಚಿವ ಸಂಪುಟ ಸದಸ್ಯರು ಶಿಷ್ಟಾಚಾರ ಉಲ್ಲಂಘಿಸಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ 'ಮಹಾದಾಯಿ ಜಲಾನಯನ' ಪ್ರದೇಶಕ್ಕೆ ಭೇಟಿ ನೀಡಿರುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಆಕ್ಷೇಪಿಸಿದ್ದಾರೆ.

ರವಿವಾರ ಹುನಗುಂದದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗೋವಾ ಸಚಿವರು ಕದ್ದುಮುಚ್ಚಿ ಕಣಕುಂಬಿಗೆ ಬರುವ ಅಗತ್ಯವಿರಲಿಲ್ಲ. ರಾಜ್ಯ ಸರಕಾರಕ್ಕೆ ಮಾಹಿತಿ ನೀಡಿ ಬಂದಿದ್ದರೆ, ಶಿಷ್ಟಾಚಾರದನ್ವಯ ಅಗತ್ಯ ಭದ್ರತೆ ಕಲ್ಪಿಸಲಾಗುತ್ತಿತ್ತು ಎಂದು ಹೇಳಿದರು.

ಗೋವಾ ಜನಪ್ರತಿನಿಧಿಗಳು ಕಳ್ಳತನದಿಂದ ಜಲಾನಯನ ಪ್ರದೇಶಕ್ಕೆ ಬರಲು ಅಲ್ಲಿ ನಾವೇನು ಅಕ್ರಮವಾಗಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಮಹಾದಾಯಿ ವಿವಾದ ನ್ಯಾಯಮಂಡಳಿಯ ಮುಂದೆ ಇರುವ ಕಾರಣ ಅದಕ್ಕೆ ಅವಕಾಶವೂ ಇಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.

ಕಣಕುಂಬಿಗೆ ಭೇಟಿ ನೀಡಲು ಅವಕಾಶ ನೀಡಿಲ್ಲ ಎಂದು ಕರ್ನಾಟಕದ ಮೇಲೆ ಆರೋಪ ಮಾಡಲಾಗುತ್ತಿದೆ. ಆದರೆ ಸಿಎಂ, ಅವರು ಬಂದು ನೋಡಿಕೊಂಡು ಹೋಗಲಿ ಎಂದು ಹೇಳಿದ್ದಾರೆ. ಕಾನೂನು ಬಾಹಿರವಾಗಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ನಾವು ಪಾರದರ್ಶಕವಾಗಿದ್ದೇವೆ ಎಂದು ಪಾಟೀಲ್ ಹೇಳಿದರು.

ಗೋವಾ ಸಚಿವರು ಅಲ್ಲಿನ ಜನರ ಕಣ್ಣು ಒರೆಸುವ ತಂತ್ರ ಮಾಡುತ್ತಿದ್ದು, ಗೋವಾ ಮುಖ್ಯಮಂತ್ರಿ ಕಣಕುಂಬಿಗೆ ಬಂದಿಲ್ಲ. ಅಲ್ಲಿನ ಸ್ಪೀಕರ್ ಮತ್ತು ಸಚಿವ ಸಂಪುಟದ ಸದಸ್ಯರು ಬಂದಿದ್ದು, ಪರಿಶೀಲನೆ ನಡೆಸಿಕೊಂಡು ಹೋಗಿದ್ದಾರೆಂದು ಪಾಟೀಲ್ ತಿಳಿಸಿದರು.

'ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿರುವ ಕಣಕುಂಬಿಗೆ ಗೋವಾ ವಿಧಾನಸಭಾ ಸ್ಪೀಕರ್ ನೇತೃತ್ವದಲ್ಲಿ ಇಬ್ಬರು ಶಾಸಕರು, ಮಾಜಿ ಶಾಸಕರು ಸೇರಿದಂತೆ 40 ಮಂದಿ ಬೆಂಬಲಿಗರು ಹಾಗೂ ಮಾಧ್ಯಮ ಪ್ರತಿನಿಧಿಗಳು ಭೇಟಿ ನೀಡಿದ್ದರು. ಗೋವಾ ಸಿಎಂ ಬಂದಿರಲಿಲ್ಲ'
-ಸುಧೀರ್‌ ಕುಮಾರ್ ರೆಡ್ಡಿ, ಬೆಳಗಾವಿ ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News