ಜಾತ್ಯತೀತತೆಯ ಮೇಲಿನ ದಾಳಿಗೆ ಪ್ರತಿರೋಧ ಒಡ್ಡಬೇಕಾಗಿದೆ: ತೀಸ್ತಾ ಸೆಟಲ್ವಾಡ್

Update: 2018-01-28 11:41 GMT

ಬೆಂಗಳೂರು, ಜ. 28: ಜಾತ್ಯತೀತತೆಯ ಮೇಲೆ ನಿರಂತರ ದಾಳಿಗಳಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ದಾಳಿಗಳಿಗೆ ಪ್ರತಿರೋಧ ಒಡ್ಡುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ ಎಂದು ಪತ್ರಕರ್ತೆ ಹಾಗೂ ಸಿಟಿಜನ್ ಫಾರ್ ಜಸ್ಟಿಸ್ ಅಂಡ್ ಪೀಸ್ ಸಂಸ್ಥೆ ಕಾರ್ಯದರ್ಶಿ ತೀಸ್ತಾ ಸೆಟಲ್ವಾಡ್ ಕರೆ ನೀಡಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಜನಚಿಂತನ ಕೇಂದ್ರ ಹಾಗೂ ಕೋಮು ಸೌಹಾರ್ದ ವೇದಿಕೆ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ‘ಭಾರತದ ಸಂದರ್ಭದಲ್ಲಿ ಫ್ಯಾಸಿಸಂ ಅರ್ಥಮಾಡಿಕೊಳ್ಳುವ ಹಾಗೂ ಪ್ರತಿರೋಧಿಸುವ ಬಗೆ’ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದೆರಡು ದಶಕಗಳಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಾಕಷ್ಟು ಬದಲಾವಣೆಯಾಗಿದೆ. ಜಾತ್ಯತೀತತೆ ಬಗ್ಗೆ ಚರ್ಚೆಗಳಾಗುತ್ತಿವೆ. ಆದರೆ, ಪ್ರತಿರೋಧ ಒಡ್ಡುವ ಮನೋಭಾವ ಸೃಷ್ಠಿಸುವಲ್ಲಿ ವಿಫಲವಾಗಿದ್ದೇವೆ. ಹೀಗಾಗಿ ಜಾತ್ಯತೀತತೆ ಮೇಲೆ ನಿರಂತರ ದಾಳಿಗಳಾಗುತ್ತಿವೆ ಎಂದು ಎಚ್ಚರಿಸಿದರು.

ಬಂಡವಾಳಶಾಹಿಗಳ ಹಿಡಿತದಿಂದ ಸಮಾಜದಲ್ಲಿ ಅವಕಾಶವಾದಿತನ ಹೆಚ್ಚುತ್ತಿದೆ. ಜಾತ್ಯತೀತತೆ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಮನೋಭಾವ ಬೆಳಸಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದಲ್ಲಿ ಪೊಲೀಸ್, ಅಧಿಕಾರಶಾಹಿ ವ್ಯವಸ್ಥೆಯನ್ನು ಪ್ರಶ್ನಿಸಬಹುದು.
ಆದರೆ, ನ್ಯಾಯಾಂಗ, ಮಾಧ್ಯಮವನ್ನು ಪ್ರಶ್ನಿಸಲಾಗುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ. ಸಾಮಾಜಿಕ ಜಾಲತಾಣದಿಂದ ಎಲ್ಲವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಜನರನ್ನು ಸಂಘಟಿಸುವ ಜಾತ್ಯತೀತತೆ ಶಕ್ತಿ ಪ್ರದರ್ಶಿಸಬೇಕು ಎಂದರು.

ಸಾಮಾಜಿಕ ಹೋರಾಟಗಾರ ನೂರ್ ಶ್ರೀಧರ್ ಮಾತನಾಡಿ, ಜಾತೀಯತೆ ಭೂತಾಕಾರವಾಗಿ ಬೆಳದಿದೆ. ಇದರ ವಿರುದ್ಧ ಹೋರಾಡಲು ಜಾತಿ, ವರ್ಗ, ಲಿಂಗ, ಧರ್ಮ, ರಾಷ್ಟ್ರೀಯತೆಯನ್ನು ಸಮಗ್ರವಾಗಿ ಗ್ರಹಿಸಿ, ಸಮಗ್ರ ಸಿದ್ಧಾಂತ ರೂಪಿಸಬೇಕಿದೆ. ಜಾತೀಯತೆಯಲ್ಲಿ ಬ್ರಾಹ್ಮಣ್ಯ ಜಾತಿವಾದ, ಬಂಡವಾಳಶಾಹಿ ಎಂಬ ಎರಡು ಮಣ್ಣಿನ ಕಾಲುಗಳನ್ನು ಮುರಿಯಲು ಜಾತ್ಯತೀತವಾದಿಗಳು ಜನಶಕ್ತಿಯಾಗಿ ರೂಪುಗೊಳ್ಳಬೇಕಿದೆ ಎಂದು ಕರೆ ನೀಡಿದರು.

ಕಾರ್ಯಗಾರದಲ್ಲಿ ಜನಚಿಂತನಾ ಕೇಂದ್ರದ ಸಂಚಾಲಕರಾದ ಮೋಹನ್, ಲಲಿತಾ, ಪ್ರೊ.ವಿ.ಎಸ್.ಶ್ರೀಧರ್ ಸೇರಿದಂತೆ ಕೇರಳ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

‘ರಾಜಕೀಯ ಶಕ್ತಿ ಪ್ರತಿಯೊಬ್ಬ ನಾಗರಿಕನ ಕೈಗೆ ಸಿಗುವಂತಾಗಬೇಕು. ಹೀಗಾಗಿ ಜಾತೀಯತೆ ವಿರುದ್ಧ ಹೋರಾಡಲು ಪರ್ಯಾಯ ಶಕ್ತಿ ರೂಪಿಸಿ ಹೋರಾಟ ಮಾಡಬೇಕಿದೆ’
-ನೂರ್ ಶ್ರೀಧರ್, ಸಾಮಾಜಿಕ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News