ಮಳೆ ನೀರು ಸಂಗ್ರಹಣೆಯಿಂದ ನೀರಿನ ಸಮಸ್ಯೆ ದೂರ: ಸಚಿವ ಕೃಷ್ಣ ಬೈರೇಗೌಡ

Update: 2018-01-28 12:10 GMT

ಬೆಂಗಳೂರು, ಜ. 28: ಮಳೆ ನೀರು ಮುಗಿದು ಹೋಗುವ ಸಂಪನ್ಮೂಲವಾಗಿದ್ದು, ಅದನ್ನು ಸಂಗ್ರಹಣೆ ಮಾಡುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯ ಪಟ್ಟಿದ್ದಾರೆ.

ರವಿವಾರ ನಗರದ ಜಿಕೆವಿಕೆಯಲ್ಲಿ ಗ್ಲೋಬಲ್ ಎಂಟರ್ ಪ್ರೈಸಸ್ ವತಿಯಿಂದ ಆಯೋಜಿಸಿದ್ದ ಮಳೆ ನೀರು ಕೊಯ್ಲು ಮತ್ತು ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀರಿನ ಸಮಸ್ಯೆಯಿಂದ ಪ್ರಕೃತಿಯ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ನೀರನ್ನು ಎಂದಿಗೂ ಖಾಲಿಯಾಗದಂತೆ ಕಾಪಾಡಿಕೊಳ್ಳುವ ಸಲುವಾಗಿ ಪ್ರತಿಯೊಬ್ಬರೂ ಮನೆಗಳಲ್ಲಿ ನೀರು ಶೇಖರಣಾ ತೊಟ್ಟಿಗಳನ್ನು ನಿರ್ಮಿಸಿ, ನೀರನ್ನು ಸಂಗ್ರಹಿಸುವ ಮೂಲಕ ಮಳೆ ನೀರನ್ನು ಮರು ಬಳಕೆ ಮಾಡಬೇಕು. ಈ ಮೂಲಕ ನೀರನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮದಿಂದಾಗಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶದಲ್ಲಿ ಯತೇಚ್ಚವಾಗಿ ನೀರನ್ನು ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ, ನೀರಿನ ಸಮಸ್ಯೆಯಿಂದ ಮುಕ್ತವಾಗಬೇಕಾದರೆ ನೀರನ್ನು ಸಂಗ್ರಹಣೆ ಮಾಡಿ ಮರು ಬಳಕೆ ಮಾಡುವುದೊಂದೇ ದಾರಿ ಎಂದು ಅವರು ಹೇಳಿದರು.

ಇದೇ ವೇಳೆ ಮಳೆ ನೀರು ಸಂಗ್ರಹಣೆ ಬಗ್ಗೆ ಮಳೆ ನೀರು ಕೊಯ್ಲಿನ ಪ್ರಾತ್ಯಕ್ಷಿತೆ ನೀಡಲಾಯಿತು. ಮ್ಯಾರಾಥಾನ್ ಮೂಲಕ ಜಾಗೃತಿ ಮೂಡಿಸಲಾಯಿತು.

ಬೆಂಗಳೂರು ಜಲಮಂಡಳಿಯ ಮಂಜುನಾಥ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ರಾಜಶೇಖರ್, ಜಲಮಂಡಳಿ ವ್ಯವಸ್ಥಾಪಕ ಬಾಲ ಸುಬ್ರಮಣ್ಯಂ, ವಿಜಯ್ ರಾಜ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News