ರಾಜಕೀಯ ಪ್ರವೇಶದ ರೀತಿ ಬದಲಾಗಿದೆ: ದಿನೇಶ್ ಅಮೀನ್‌ ಮಟ್ಟು

Update: 2018-01-28 12:45 GMT

ಬೆಂಗಳೂರು, ಜ.28: ಹೋರಾಟದ ಮೂಲಕ ರಾಜಕೀಯಕ್ಕೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ರಾಜಕೀಯ ಪ್ರವೇಶದ ರೀತಿಯೇ ಬದಲಾಗಿದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮಾಜಿ ಶಾಸಕ ಯು.ಭೂಪತಿ ಸ್ಮರಣೆ, ಸ್ಮಾರಕ ಟ್ರಸ್ಟ್ ಉದ್ಘಾಟನೆ ಹಾಗೂ ‘ಅಂತಃಕರಣದ ಗಣಿ ಯು.ಭೂಪತಿ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರಾಜಕೀಯ ನಾಯಕರ ಹುಟ್ಟುಹಬ್ಬಕ್ಕೆ ದೊಡ್ಡ ಫ್ಲೆಕ್ಸ್ ಹಾಕಿ, ಜಾಹೀರಾತು ನೀಡುವ ಜೊತೆಗೆ ದಿಲ್ಲಿಯಲ್ಲಿ ಸಣ್ಣ ಒಡನಾಟವಿಟ್ಟುಕೊಂಡರೆ ರಾಜಕೀಯಕ್ಕೆ ಬರಬಹುದು ಎನ್ನುವ ಮನೋಭಾವ ಬಂದಿದೆ. ಆದರೆ, ಹೋರಾಟದ ರಾಜಕೀಯ ಕಣ್ಮರೆಯಾಗಿದೆ ಎಂದು ಅವರು ಹೇಳಿದರು.

ಒಳ್ಳೆಯವರು, ಒಳ್ಳೆಯದನ್ನು ಮಾಡುವವರಿಗೆ ವರ್ತಮಾನ ಬಹಳ ಕ್ರೂರವಾಗಿರುತ್ತದೆ. ಸಮಾಜದಲ್ಲಿ ಉತ್ತಮ ಕಾರ್ಯ ಮಾಡುವವರನ್ನು ಜನಸಾಮಾನ್ಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿರುತ್ತಾರೆಂದ ಅವರು, ಭೂಪತಿ ಅವರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದಾಗ ಅವರ ಕೈಯಲ್ಲಿ 10ರೂ. ಹಣವೂ ಇರಲಿಲ್ಲ. ಸೈಕಲ್‌ನಲ್ಲಿ ಪ್ರಚಾರ ಮಾಡುತ್ತಿದ್ದರು ಎಂದು ನೆನಪಿಸಿಕೊಂಡರು.

ಸಮಾಜ ಸೇವೆಯಲ್ಲಿ ಬಹಳಷ್ಟು ವಿಧಾನಗಳಿವೆ. ಆದರೆ, ಇಂದು ಕೆಲವರು ತಿರುಪತಿ ತಿಮ್ಮಪ್ಪನವರಿಗೆ ಚಿನ್ನದ ಕಿರೀಟ ಹಾಕುತ್ತಾರೆ. ಗಣಿಯನ್ನು ಲೂಟಿ ಹೊಡೆಯುತ್ತಾರೆಂದ ಅವರು, ರಾಜಕೀಯವೂ ನನ್ನ ಸಮಾಜ ಸೇವೆಯ ಭಾಗ, ಜೀವನ ಕ್ರಮ ಎಂದು ತಿಳಿದು ಬಾಳುವವರು ಬಹಳ ಕಡಿಮೆ. ಅಂತವರಲ್ಲಿ ಭೂಪತಿ ಕೂಡಾ ಒಬ್ಬರು ಎಂದು ದಿನೇಶ್ ಅಮೀನ್‌ಮಟ್ಟು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News