ಯು.ಭೂಪತಿಯವರಿಗೆ ವಕೀಲ ವೃತ್ತಿ ಮುಂದುವರೆಸಿ ಎಂದಿದ್ದೆ: ಪ್ರೊ.ರವಿವರ್ಮ ಕುಮಾರ್

Update: 2018-01-28 12:40 GMT

ಬೆಂಗಳೂರು, ಜ.28: ಮಾಜಿ ಶಾಸಕ ಯು.ಭೂಪತಿ ಅವರಿಗೆ ರಾಜಕೀಯ ಬಿಟ್ಟು, ವಕೀಲ ವೃತ್ತಿ ಮುಂದುವರೆಸಿ ಎಂದು ಪದೇ ಪದೇ ಹೇಳುತ್ತಿದ್ದೆ ಎಂದು ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಸಂವಿಧಾನ ತಜ್ಞ ಪ್ರೊ. ರವಿವರ್ಮ ಕುಮಾರ್ ಹೇಳಿದರು.

ರವಿವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಯು.ಭೂಪತಿ ಸ್ಮರಣೆ, ಅವರ ಹೆಸರಿನಲ್ಲಿ ಸ್ಮಾರಕ ಟ್ರಸ್ಟ್ ಉದ್ಘಾಟನೆ ಹಾಗೂ ‘ಅಂತಃಕರಣದ ಗಣಿ ಯು.ಭೂಪತಿ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರಾಜಕೀಯದಲ್ಲಿ ಸಾಮಾಜಿಕ ಹಿನ್ನೆಲೆಯುಳ್ಳವರಿಗೆ, ಜಾತಿಯನ್ನೇ ಬಂಡವಾಳ ಮಾಡಿಕೊಳ್ಳುವ ಶಕ್ತಿ ಇಲ್ಲದವರಿಗೆ ಯಾವ ಪಕ್ಷದಲ್ಲೂ ಸ್ಥಾನ ಇರುವುದಿಲ್ಲ. ನೀವು ಎಷ್ಟೇ ಪ್ರಾಮಾಣಿಕವಾಗಿ ಸಕ್ರಿಯವಾಗಿ ಕೆಲಸ ಮಾಡಿದರೂ ಪ್ರತಿಫಲ ಸಿಗುವುದು ಕಷ್ಟ. ಹೀಗಾಗಿ, ವಕೀಲ ವೃತ್ತಿಯನ್ನು ಮುಂದುವರೆಸಿ ಎಂದು ಯು.ಭೂಪತಿ ಅವರಿಗೆ ಹೇಳಿದ್ದೆ ಎಂದರು.

ಭೂಪತಿ ನನ್ನ ಜತೆಗೆ ವಕೀಲ ವೃತ್ತಿಯ ಸಹದ್ಯೋಗಿಯಾಗಿ ಕೆಲಸ ಮಾಡಿದ್ದರು. ಅವರು ಲೆಕ್ಕಕ್ಕೋಸ್ಕರ ಒಡನಾಡಿಯಾದರೂ ಅವರಿಗೆ ರಾಜಕಾರಣದಲ್ಲೇ ವಿಶೇಷ ಆಸಕ್ತಿ ಇತ್ತು ಎಂದ ಅವರು, ಭೂಪತಿ ಅವರ ನೇತೃತ್ವದಲ್ಲಿ ಮೂರು ಅಂತರ್‌ ರಾಜ್ಯ ಸಾಮಾಜಿಕ ನ್ಯಾಯದ ಪ್ರವಾಸಗಳನ್ನು ಕೈಗೊಂಡಿದ್ದೆವು. ಅಂತಹ ಕ್ರಿಯಾಶೀಲ ವ್ಯಕ್ತಿ ಇಂದು ನಮ್ಮೊಡನೆ ಇಲ್ಲ. ಆದರೆ, ಅವರ ನೆನಪನ್ನು ಇಷ್ಟು ರಚನಾತ್ಮಕವಾಗಿ ಮಾಡಿರುವುದು ಸಂತಸದ ಸಂಗತಿ ಎಂದು ರವಿವರ್ಮ ಕುಮಾರ್ ಹೇಳಿದರು.

ಭೂಪತಿ ಕುರಿತ ಕೃತಿಯಲ್ಲಿ ರಾಜಕಾರಣ, ಅವರ ಹೋರಾಟಗಳನ್ನು ದಾಖಲಿಸಿರುವುದು ರಚನಾತ್ಮಕ ಕೆಲಸ. ಟ್ರಸ್ಟ್ ಪ್ರಾರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಅವರ ಹೆಸರನ್ನು ನಿರಂತರವಾಗಿ ಜ್ಞಾಪಿಸಿಕೊಳ್ಳುವ ಜತೆಗೆ ಅವರ ಹೆಸರಿನಲ್ಲಿ ನಡೆಯಬೇಕಾದ ಕೆಲಸಗಳನ್ನು ಅನಾವರಣ ಮಾಡಲು ವೇದಿಕೆಯಾಗಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಮಾತನಾಡಿ,ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ದಿ.ಯು.ಭೂಪತಿ ಅವರು ಸರಳ ವ್ಯಕ್ತಿತ್ವ, ನೇರ ನುಡಿಯ ವ್ಯಕ್ತಿಯಾಗಿದ್ದರು. ಅವರ ಸಿದ್ದಾಂತಗಳು ಬೇರೆಯಾಗಿದ್ದು, ವ್ಯಕ್ತಿತ್ವದ ಬಗ್ಗೆ ಒಬ್ಬರೂ ಪ್ರಶ್ನೆ ಮಾಡುತ್ತಿರಲಿಲ್ಲ ಎಂದು ಹೇಳಿದರು.

ಕೆಪಿಸಿಸಿಗೆ ಸಂಬಂಧಪಟ್ಟಂತೆ ಅವರು ಮಾರ್ಗದರ್ಶಕರಾಗಿದ್ದರು. ಪಕ್ಷವನ್ನು ಗೌರವಿಸುತ್ತಿದ್ದ ಅವರು, ಯಾವುದೇ ತಪ್ಪುಗಳು ಕಂಡುಬಂದಲ್ಲಿ ನೇರವಾಗಿಯೇ ಸಭೆಯಲ್ಲಿಯೇ ಹೇಳುತ್ತಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ಭೂಪತಿ ಅವರು, ವಿಷಯ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಸಿ.ಆರ್.ಸಿಂಧ್ಯಾ, ವಿಚಾರವಾದಿ ಜಿ. ರಾಮಕೃಷ್ಣ, ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು, ಇಂದಿರಾ ಕೃಷ್ಣಪ್ಪ, ಮೋಹನ್ ಕೊಂಡಜ್ಜಿ, ಕೆ.ಬಿ.ಶಾಣಪ್ಪ, ಯು.ಭೂಪತಿ ಸ್ಮಾರಕ ಟ್ರಸ್ಟ್ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಕಾರ್ಯದರ್ಶಿ ಅಭಿಮನ್ಯು ಭೂಪತಿ, ಕೃತಿ ಸಂಪಾದಕ ಚಂದ್ರಕಾಂತ್‌ವಡ್ಡು ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News