ಕಾಬೂಲ್: ಸೇನಾ ಠಾಣೆ ಮೇಲೆ ದಾಳಿ; 5 ಸೈನಿಕರು ಹತ

Update: 2018-01-29 17:41 GMT

ಕಾಬೂಲ್ (ಅಫ್ಘಾನಿಸ್ತಾನ), ಜ. 30: ಇಲ್ಲಿರುವ ಅಫ್ಘಾನಿಸ್ತಾನದ ಸೇನಾ ಅಕಾಡಮಿಯೊಂದರ ಸಮೀಪದ ಸೇನಾ ಹೊರಠಾಣೆಯ ಮೇಲೆ ಬಂದೂಕುಧಾರಿಗಳು ಸೋಮವಾರ ನಡೆಸಿದ ದಾಳಿಯಲ್ಲಿ ಐವರು ಸೈನಿಕರು ಮೃತಪಟ್ಟಿದ್ದಾರೆ ಹಾಗೂ 10 ಮಂದಿ ಗಾಯಗೊಂಡಿದ್ದಾರೆ.

ರಾಜಧಾನಿ ಕಾಬೂಲ್‌ನ ಪಶ್ಚಿಮದ ಹೊರವಲಯದಲ್ಲಿರುವ ಮಾರ್ಶಲ್ ಫಾಹಿಮ್ ಸೇನಾ ಅಕಾಡಮಿ ಸಮೀಪ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ವಹಿಸಿಕೊಂಡಿದೆ.

ಕಾಬೂಲ್‌ನ ಕೇಂದ್ರ ಭಾಗದಲ್ಲಿ ನಡೆದ ಆ್ಯಂಬುಲೆನ್ಸ್ ಬಾಂಬ್ ಸ್ಫೋಟದಲ್ಲಿ 100 ಮಂದಿ ಮೃತಪಟ್ಟ ಕೇವಲ 2 ದಿನಗಳ ಬಳಿಕ ಈ ದಾಳಿ ನಡೆದಿದೆ.

ಅಕಾಡಮಿಗೆ ಸಮೀಪದ ಹೊರಠಾಣೆಯ ಮೇಲೆ ರಾಕೆಟ್ ಚಾಲಿತ ಗ್ರೆನೇಡ್‌ಗಳು ಮತ್ತು ಸ್ವಯಂಚಾಲಿತ ರೈಫಲ್‌ಗಳಿಂದ ಸಜ್ಜಿತರಾದ ಐವರು ಭಯೋತ್ಪಾದಕರು ಮುಂಜಾನೆ ವೇಳೆ ದಾಳಿ ನಡೆಸಿದರು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದರು. ಈ ದಾಳಿಯಲ್ಲಿ ಐವರು ಸೈನಿಕರು ಮೃತಪಟ್ಟರು ಹಾಗೂ 10 ಮಂದಿ ಗಾಯಗೊಂಡರು ಎಂದರು.

ಆ್ಯಂಬುಲೆನ್ಸ್ ಸ್ಫೋಟದಲ್ಲಿ ಮೃತರ ಸಂಖ್ಯೆ 103ಕ್ಕೆ ಏರಿಕೆ

ಶನಿವಾರ ಕಾಬೂಲ್‌ನಲ್ಲಿ ಸಂಭವಿಸಿದ ಆ್ಯಂಬುಲೆನ್ಸ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 103ಕ್ಕೇರಿದೆ ಎಂದು ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಇದು ಇತ್ತೀಚಿನ ತಿಂಗಳುಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ.

‘‘ದಾಳಿಯಲ್ಲಿ ಗಾಯಗೊಂಡ ಹಲವಾರು ಮಂದಿ ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಸಂಖ್ಯೆ ಈಗ 103’’ ಎಂದು ಆಂತರಿಕ ಸಚಿವ ವಾಯಿಸ್ ಬರ್ಮಕ್ ಸುದ್ದಿಗಾರರಿಗೆ ತಿಳಿಸಿದರು.

ಗಾಯಗೊಂಡ 235 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News