ಅಂಡರ್ 19 ವಿಶ್ವಕಪ್: ಇಂದು ಭಾರತ-ಪಾಕ್ ಸೆಮಿಫೈನಲ್

Update: 2018-01-29 19:02 GMT

ಕ್ರೈಸ್ಟ್‌ಚರ್ಚ್, ಜ.29: ಅಂಡರ್ -19 ಕ್ರಿಕೆಟ್ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಭಾರತ ತಂಡ ಮಂಗಳವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಮೂರು ಬಾರಿ ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ ಆಡಿರುವ ಎಲ್ಲ ನಾಲ್ಕು ಪಂದ್ಯಗಳಲ್ಲೂ ಜಯ ಗಳಿಸಿತ್ತು. ಬಾಂಗ್ಲಾದೇಶ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಜಯ ಗಳಿಸಿ ಸೆಮಿಫೈನಲ್‌ಗೇರಿದೆ.

ಎರಡು ಬಾರಿ ಚಾಂಪಿಯನ್ ಆಗಿರುವ ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋಲು ಅನುಭವಿಸಿತ್ತು. ಬಳಿಕ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಸೆಮಿಫೈನಲ್ ತಲುಪಿದೆ. ಪಾಕಿಸ್ತಾನ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕ ತಂಡಕ್ಕೆ ಸೋಲುಣಿಸಿತ್ತು.

ಪಾಕಿಸ್ತಾನ ಕಳೆದ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕ ವಿರುದ್ಧ 3 ವಿಕೆಟ್‌ಗಳ ಜಯ ಗಳಿಸಿತ್ತು.

ಪಾಕಿಸ್ತಾನದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಆದರೆ ಬ್ಯಾಟಿಂಗ್ ಅಷ್ಟೇನೂ ಬಲಿಷ್ಠವಾಗಿಲ್ಲ.ಎಡಗೈ ವೇಗಿ ಶಾಹೀನ್ ಅಫ್ರಿದಿ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಅವರು ಈ ತನಕ ಟೂರ್ನಿಯಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಐರ್ಲೆಂಡ್ ವಿರುದ್ಧ 6 ವಿಕೆಟ್ ಉಡಾಯಿಸಿದ್ದರು.

 ಅಲಿ ಝರ್ಯಾಬ್ ಆಸಿಫ್ ಪಾಕಿಸ್ತಾನ ಎರಡು ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾಗ ಅಗತ್ಯದ ಕೊಡುಗೆ ನೀಡಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ದಕ್ಷಿಣ ಆಫ್ರಿಕ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿದ್ದಾಗ 74 ರನ್ ಕೊಡುಗೆ ನೀಡಿದ್ದರು. ಶ್ರೀಲಂಕಾ ವಿರುದ್ಧ 59 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

 ಕಮಲೇಶ್ ನಾಗರಕೋಟಿ ಮತ್ತು ಶಿವಂ ಮಾವಿ ಅವರ ಬೌಲಿಂಗ್ ದಾಳಿ ಯಶಸ್ವಿಯಾದರೆ ಭಾರತಕ್ಕೆ ಪಾಕ್ ವಿರುದ್ಧ ಗೆಲುವು ಖಚಿತ. ಈ ಇಬ್ಬರು ಬೌಲರ್‌ಗಳು ಐಪಿಎಲ್‌ನಲ್ಲಿ ದೊಡ್ಡ ಮೊತ್ತಕ್ಕೆ ಹರಜಾಗಿದ್ದಾರೆ. ಇದರಿಂದ ಅವರ ಜೀವನದ ದಿಕ್ಕು ಬದಲಾಗಲಿದೆ. ಕೋಲ್ಕತಾ ನೈಟ್ ರೈಡರ್ಸ್‌ ತಂಡ ನಾಗರಕೋಟಿ ಅವರನ್ನು 3.2 ಕೋಟಿ ರೂ.ಗೆ ಮತ್ತು ಮಾವಿ ಅವರನ್ನು 3 ಕೋಟಿ ರೂ.ಗೆ ಖರೀದಿಸಿದೆ.

  ಎಡಗೈ ಸ್ಪಿನ್ನರ್‌ಗಳಾದ ಅನುಕುಲ್ ರಾಯ್ ಅವರನ್ನು 20 ಲಕ್ಷ ರೂ.ಗೆ ಮತ್ತು ಅಭಿಷೇಕ್ ಶರ್ಮಾರನ್ನು 55 ಲಕ್ಷ ರೂ.ಗೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಖರೀದಿಸಿದೆ.

 ಕ್ವಾರ್ಟರ್ ಫೈನಲ್‌ನಲ್ಲಿ ಶುಭಮ್ ಗಿಲ್ 86 ರನ್ ಸಿಡಿಸಿದ್ದರು. ಅವರು ಟೂರ್ನಿಯಲ್ಲಿ ಒಟ್ಟು 239 ರನ್ ಸಂಪಾದಿಸಿದ್ದಾರೆ. ಗಿಲ್ ಐಪಿಎಲ್‌ನಲ್ಲಿ 1.8 ಕೋಟಿ ರೂ.ಗೆ ಕೋಲ್ಕತಾ ನೈಟ್ ರೈಡರ್ಸ್‌ ಸೇರ್ಪಡೆಗೊಂಡಿದ್ದಾರೆ. ನಾಯಕ ಪೃಥ್ವಿ ಶಾ ಅವರು 1.2 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.

ಶಾ ಅವರ ಆರಂಭಿಕ ಜೊತೆಗಾರ ಮನ್‌ಜೋತ್ ಕಾಲ್ರಾ ಅವರು 20 ಲಕ್ಷ ರೂ.ಗೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಸೇರ್ಪಡೆಗೊಂಡಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತದ ಅಂಡರ್-19 ತಂಡ ಬಲಿಷ್ಠವಾಗಿ ರೂಪುಗೊಂಡಿದೆ.

►ಭಾರತ ಅಂಡರ್-19 ತಂಡ: ಪೃಥ್ವಿ ಶಾ(ನಾಯಕ), ಶುಭಮ್ ಗಿಲ್, ಅರ್ಯಾನ್ ಜುಯಾಲ್, ಅಭಿಶೇಕ್ ಶರ್ಮಾ, ಅರ್ಶದೀಪ್ ಸಿಂಗ್, ಹಾರ್ವಿಕ್ ದೇಸಾಯಿ, ಮನ್‌ಜೋತ್ ಕಾಲ್ರಾ, ಕಮಲೇಶ್ ನಾಗರಕೋಟಿ, ಪಂಕಜ್ ಯಾದವ್, ರಿಯಾನ್ ಪರಾಗ್, ಇಶಾನ್ ಪಾರೊಲ್, ಹಿಮಾಂಶು ರಾಣಾ, ಅನುಕುಲ್ ರಾಯ್, ಶಿವಮ್ ಮಾವಿ, ಶಿವ ಸಿಂಗ್.

ಪಾಕಿಸ್ತಾನ ಅಂಡರ್-19 ತಂಡ : ಹಸನ್ ಖಾನ್(ನಾಯಕ), ರೊಹೈಲ್ ನಝೀರ್, ಮುಹಮ್ಮದ್ ಅಲಿ ಖಾನ್, ಅಲಿ ಝರ್ಯಾಬ್, ಅಮ್ಮದ್ ಅಲಮ್, ಅರ್ಶದ್ ಇಕ್ಬಾಲ್, ಇಮ್ರಾನ್ ಶಾಹ್, ಮುಹಮ್ಮದ್ ತಾಹ, ಮುಹಮ್ಮದ್ ಮೊಯ್ಸಿನ್ ಖಾನ್, ಮುಹಮ್ಮದ್ ಮುಸಾ, ಮುಹಮ್ಮದ್ ಝೈದ್, ಮುನೀರ್ ರಿಯಾಝ್, ಸಹಾದ್ ಖಾನ್, ಶಾಹೀನ್ ಅಫ್ರಿದಿ, ಸುಲೈಮಾನ್ ಶಫಿಕತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News