ಅಫ್ಘಾನಿಸ್ತಾನಕ್ಕೆ ಸೋಲು: ಆಸ್ಟ್ರೇಲಿಯ ಪೈನಲ್‌ಗೆ

Update: 2018-01-29 19:04 GMT

 ಕ್ರೈಸ್ಟ್‌ಚರ್ಚ್, ಜ.29: ಅಫ್ಘಾನಿಸ್ತಾನ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿರುವ ಆಸ್ಟ್ರೇಲಿಯ ತಂಡ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ಆಸ್ಟ್ರೇಲಿಯ ಫೈನಲ್‌ನಲ್ಲಿ ಮಂಗಳವಾರ ನಡೆಯಲಿರುವ ಎರಡನೇ ಸೆಮಿ ಫೈನಲ್‌ನಲ್ಲಿ ಜಯಶಾಲಿಯಾಗುವ ಭಾರತ ಅಥವಾ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ 181 ರನ್ ಗಳಿಸಿತು. ಅಫ್ಘಾನಿಸ್ತಾನದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಕ್ರಮ್ ಅಲಿ ಖಿಲ್ ಆಸ್ಟ್ರೇಲಿಯದ ದಾಳಿಯನ್ನು ದಿಟ್ಟವಾಗಿ ಎದುರಿಸಿ 119 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 80 ರನ್ ಗಳಿಸಿದರು. ಅವರಿಗೆ ಮತ್ತೊಂದು ಕಡೆಯಿಂದ ರಹ್ಮಾನುಲ್ಲಾ ಗುರ್ಬಝ್(20) ಹೊರತುಪಡಿಸಿ ಉಳಿದವರಿಂದ ಉತ್ತಮ ಬೆಂಬಲ ಸಿಗಲಿಲ್ಲ. ಅಫ್ಘಾನ್‌ನ ಏಳು ಬ್ಯಾಟ್ಸ್ ಮನ್‌ಗಳು ಎರಡಂಕೆ ದಾಟಲು ವಿಫರಾದರು. ಆಸ್ಟ್ರೇಲಿಯದ ಪರ ಮೆರ್ಲೊ ಕೇವಲ 24 ರನ್ ನೀಡಿ 4 ವಿಕೆಟ್‌ಗಳನ್ನು ಉಡಾಯಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಝಾಕ್ ಇವನ್ಸ್ 26ಕ್ಕೆ 2 ವಿಕೆಟ್ ಪಡೆದರು. ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಕ್ಕೆ 182 ರನ್ ದೊಡ್ಡ ಸವಾಲಾಗಿ ಪರಿಣಮಿಸಲಿಲ್ಲ. ಜಾಕ್ ಎಡ್ವರ್ಡ್ಸ್ 72 ರನ್ ಗಳಿಸಿ ಇನ್ನೂ 75 ಎಸೆತಗಳು ಬಾಕಿ ಇರುವಾಗಲೇ ಆಸೀಸ್‌ಗೆ ಜಯ ತಂದರು. ಐಪಿಎಲ್ ಆಟಗಾರರ ಹರಾಜಿನಲ್ಲಿ ಪಂಜಾಬ್ ತಂಡಕ್ಕೆ ಹರಾಜಾಗಿರುವ ಆಫ್-ಸ್ಪಿನ್ನರ್ ಮುಜೀಬ್ ಝದ್ರಾನ್ ಆಸೀಸ್ ಆರಂಭಿಕ ಆಟಗಾರ ಮ್ಯಾಕ್ಸ್ ಬ್ರಿಯಾಂಟ್(4)ರನ್ನು ಬೇಗನೆ ಔಟ್ ಮಾಡಿದರು. ನಾಯಕ ಜೇಸನ್ ಸಂಘಾ(26) ಲೆಗ್ ಸ್ಪಿನ್ನರ್ ಖ್ವಾಯಿಸ್ ಅಹ್ಮದ್‌ಗೆ ರಿಟರ್ನ್ ಕ್ಯಾಚ್ ನೀಡಿದರು. ಜೋನಾಥನ್ ಮೆರ್ಲೊ(170 ಬೇಗನೆ ಔಟಾದರು. ಪವನ್ ಉಪ್ಪಲ್(32) ಹಾಗೂ ನಥಾನ್ ಮೆಕ್‌ಸ್ವೀನಿ(22)ಐದನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 53 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News