ಟೆಸ್ಟ್‌ನಲ್ಲಿ ಸಚಿನ್ ದಾಖಲಿಸಿದ ಬೆಸ್ಟ್ ಇನಿಂಗ್ಸ್‌ಗೆ 19 ವರ್ಷ

Update: 2018-01-31 09:34 GMT

ಚೆನ್ನೈ, ಜ.31: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಡೆಸಿದ ಗೆಲುವಿನ ಏಕಾಂಗಿ ಹೋರಾಟಕ್ಕೆ 19 ವರ್ಷ ಸಂದಿವೆ.

   1999, ಜ.31ರಂದು ಚೆನ್ನೈನ ಎಂ.ಎ.ಚಿದಂಬರಮ್ ಸ್ಟೇಡಿಯಂನಲ್ಲಿ ತೆಂಡುಲ್ಕರ್ ಹೋರಾಟದ ಮೂಲಕ ಆಕರ್ಷಕ 136 ರನ್ ದಾಖಲಿಸಿದ್ದರು. ಅವರ ಟೆಸ್ಟ್ ಕ್ರಿಕೆಟ್ ಬದುಕಿನಲ್ಲಿ ಇದೊಂದು ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಒಂದಾಗಿದೆ.

ಸಚಿನ್ ತೆಂಡುಲ್ಕರ್ ಶತಕದ ಹೊರತಾಗಿಯೂ ಭಾರತ ಈ ಪಂದ್ಯದಲ್ಲಿ 12 ರನ್‌ಗಳ ಸೋಲು ಅನುಭವಿಸಿತ್ತು. ಸಚಿನ್ ಹೋರಾಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂದರೂ ಸೋಲಿನಿಂದ ನೊಂದುಕೊಂಡಿದ್ದ ಸಚಿನ್ ತೆಂಡುಲ್ಕರ್ ಪಂದ್ಯಶ್ರೇಷ್ಠ ಪ್ರಶಸ್ತಿ ಯನ್ನು ತಿರಸ್ಕರಿಸಿದ್ದರು.

ಪಾಕಿಸ್ತಾನ ಈ ಗೆಲುವಿನಿಂದ 2 ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಜ.28ರಿಂದ 31ರ ತನಕ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಗೆಲುವಿಗೆ 271 ರನ್‌ಗಳ ಸವಾಲು ಪಡೆದಿತ್ತು.ಆದರೆ ಸಕ್ಲೈನ್ ಮುಸ್ತಾಕ್ (93ಕ್ಕೆ 5) ದಾಳಿಗೆ ತತ್ತರಿಸಿದ ಭಾರತ 82ಕ್ಕೆ 5 ವಿಕೆಟ್ ಕಳೆದುಕೊಂಡಿತು. ಎಸ್.ರಮೇಶ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಮುಹಮ್ಮದ್ ಅಝರುದ್ದೀನ್ ಮತ್ತು ಸೌರವ್ ಗಂಗುಲಿ ಅವರನ್ನು ಕಳೆದುಕೊಂಡು ಭಾರತ ಸೋಲಿನ ದವಡೆಗೆ ಸಿಲುಕಿತ್ತು.

ಈ ಹಂತದಲ್ಲಿ ಭಾರತ ತಂಡದ ಪರ ಏಕಾಂಗಿ ಹೋರಾಟಕ್ಕಿಳಿದ ಸಚಿನ್ ಅವರಿಗೆ ಸಾಥ್ ನೀಡಿದವರು ವಿಕೆಟ್ ಕೀಪರ್ ನಯನ್ ಮೊಂಗಿಯಾ. ಇವರು ಪಾಕಿಸ್ತಾನದ ಬೌಲರ್‌ಗಳ ದಾಳಿಯನ್ನು ಪುಡಿ ಪುಡಿ ಮಾಡಿದ್ದರು.    ಸಚಿನ್ 83ರನ್ ಗಳಿಸಿದ್ದಾಗ ಬೆನ್ನು ನೋವು ತಡೆಯಲಾರದೆ ಕುಸಿದು ಬಿದ್ದರು. ಬಳಿಕ ಚೇತರಿಸಿಕೊಂಡು ಹೋರಾಟ ಮುಂದುವರಿಸಿದರು. 192 ನಿಮಿಷಗಳ ಇವರ ಜೊತೆಯಾಟದಲ್ಲಿ 136 ರನ್‌ಗಳು ತಂಡದ ಖಾತೆಗೆ ಸೇರ್ಪಡೆಗೊಂಡಿತು.

 ಮೊಂಗಿಯಾ 52 ರನ್ ಗಳಿಸಿ ವಸೀಮ್ ಅಕ್ರಮ್ ಎಸೆತದಲ್ಲಿ ವಕಾರ್ ಯೂನಿಸ್‌ಗೆ ಕ್ಯಾಚ್ ನೀಡಿದರು. ಆಗ ತಂಡದ ಸ್ಕೋರ್ 218ಕ್ಕೆ ಏರಿತ್ತು. ಭಾರತದ ಗೆಲುವಿಗೆ ಇನ್ನೂ 53 ರನ್‌ಗಳ ಆವಶ್ಯಕತೆ ಇತ್ತು. ಸುನೀಲ್ ಜೋಶಿ ಅವರು ಸಚಿನ್‌ಗೆ ಸಾಥ್ ನೀಡಿದರು. 36 ರನ್‌ಗಳು ಇವರ ಜೊತೆಯಾಟದಲ್ಲಿ ಸೇರ್ಪಡೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News