ಪೆಹ್ಲೂ ಖಾನ್ ಪ್ರಕರಣ: ಇಬ್ಬರು ಸಂತ್ರಸ್ತರ ವಿರುದ್ಧವೇ ಆರೋಪ ಪಟ್ಟಿ ಸಲ್ಲಿಸಿದ ಪೊಲೀಸರು !

Update: 2018-02-01 06:39 GMT

ಜೈಪುರ್, ಫೆ. 1: ಹರ್ಯಾಣದ ಡೈರಿ ಮಾಲಕ ಪೆಹ್ಲೂ ಖಾನ್ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಎರಡನೇ ಆರೋಪ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಪೆಹ್ಲೂ ಖಾನ್ ನ ಇಬ್ಬರು ಸಹವರ್ತಿಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆಯಲ್ಲದೆ ಖಾನ್ ಸಹಿತ ಮೂವರೂ ಗೋ ಕಳ್ಳ ಸಾಗಣೆಯಲ್ಲಿ ತೊಡಗಿದ್ದರೆಂದು ಆರೋಪಿಸಲಾಗಿದೆ.

ಬೆಹ್ರೋರ್ ಹೆಚ್ಚುವರಿ ಮುಖ್ಯ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. 

ಕಳೆದ ವರ್ಷದ ಎಪ್ರಿಲ್ 1ರಂದು ನಡೆದ ಘಟನೆಯ ನಂತರ ಪೊಲೀಸರು ಖಾನ್ ಅವರ ಮೇಲೆ ದಾಳಿ ನಡೆಸಿದ್ದ ದುಷ್ಕರ್ಮಿಗಳ ವಿರುದ್ಧ ಕೊಲೆ ಪ್ರಕರಣ ಹಾಗೂ ಖಾಣ್ ಮತ್ತಾತನ ಸಹವರ್ತಿಗಳ ವಿರುದ್ಧ ಗೋ ಕಳ್ಳ ಸಾಗಣಿಕೆಗಾಗಿ ಪ್ರಕರಣ ದಾಖಲಿಸಿದ್ದರು. 

ಘಟನೆಯ ವೀಡಿಯೊ ದೃಶ್ಯಾವಳಿಯ ಅಧಾರದಲ್ಲಿ ಒಟ್ಟು ಒಂಬತ್ತು ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರೂ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಇನ್ನೊಂದು ತನಿಖೆಯಲ್ಲಿ ಆರು ಮಂದಿಯ ವಿರುದ್ಧ ಆರೋಪ ಕೈಬಿಡಲಾಗಿತ್ತು.

ಜನವರಿ 24ರಂದು ಪೊಲೀಸರು ಸಲ್ಲಿಸಿದ ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಪೆಹ್ಲೂ ಖಾನ್ ಗ್ರಾಮವಾದ ಹರ್ಯಾಣದ ಜೈಸಿಂಗ್‌ಪುರ್ ಎಂಬಲ್ಲಿನ ವ್ಯಕ್ತಿಗಳಾದ ಅಝ್ಮತ್ ಹಾಗೂ ರಫೀಕ್ ಹಾಗೂ ದಾಳಿಗೊಳಗಾದ ಎರಡು ಪಿಕ್-ಅಪ್ ಟ್ರಕ್ ಗಳ ಪೈಕಿ ಒಂದನ್ನು ಚಲಾಯಿಸುತ್ತಿದ್ದ ಅರ್ಜುನ್ ಲಾಲ್ ಯಾದವ್ ಮತ್ತಾತನ ತಂದೆ ಜಗದೀಶ್ ಪ್ರಸಾದ್ ಅವರನ್ನು ಆರೋಪಿಗಳೆಂದು ಹೆಸರಿಸಿತ್ತು.

ದಾಳಿ ವೇಳೆ ಅಝ್ಮತ್ ಮತ್ತು ರಫೀಕ್ ಗೆ ಗಾಯಗಳಾಗಿದ್ದರೆ, ಯಾದವ್ ಮೇಲೂ ಹಲ್ಲೆ ನಡೆದಿದ್ದರೂ ಆತ ಅಲ್ಲಿಂದ ಪಲಾಯನಗೈದಿದ್ದ.
ಅವರೆಲ್ಲಾ ಗೋವುಗಳನ್ನು ಕಾನೂನುಬದ್ಧವಾಗಿ ಸಾಗಿಸುತ್ತಿದ್ದರೆಂಬುದಕ್ಕೆ ಯಾವುದೇ ಸಾಕ್ಷ್ಯಗಳಿರಲಿಲ್ಲ. ಇದೇ ಕಾರಣಕ್ಕೆ ಅವರ ವಿರುದ್ಧ ಗೋ ಕಳ್ಳ ಸಾಗಣಿಕೆ ಆರೋಪ ಹೊರಿಸಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.

ಘಟನೆಯಲ್ಲಿ ದಾಳಿಗೊಳಗಾಗಿ ಹಲ್ಲೆಗೊಳಗಾಗಿದ್ದರೂ ನಮ್ಮನ್ನು ಆರೋಪಿಗಳೆಂದು ಹೆಸರಿಸಿರುವುದು ಯಾವು ನ್ಯಾಯ ಎಂದು ಅಝ್ಮತ್ ಪ್ರಶ್ನಿಸುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News