ಗೆಲ್ಲುವ ಸಾಮರ್ಥ್ಯ ಇರುವವರಿಗೆ ಮಾತ್ರ ಟಿಕೆಟ್: ಡಾ.ಜಿ.ಪರಮೇಶ್ವರ್

Update: 2018-02-01 14:23 GMT

ಬೆಳಗಾವಿ, ಫೆ. 1: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಾಮರ್ಥ್ಯವಿರುವವರಿಗೆ ಮಾತ್ರ ಟಿಕೆಟ್ ಕೊಡುತ್ತೇವೆ. ಅವರನ್ನು ನೀವು ಆಯ್ಕೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಗುರುವಾರ ಇಲ್ಲಿನ ಭಾಗ್ಯನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಕಾಂಗ್ರೆಸ್ ದಕ್ಷಿಣ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಶೇ.15ರಷ್ಟು ಮತ ಪಡೆದಿದ್ದೇವೆ. ಮುಖಂಡರು ಹಾಗೂ ಕಾರ್ಯಕರ್ತರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಶತ್ರುಗಳನ್ನು ಎದುರಿಸಬೇಕೆಂಬ ರೋಷ ಬಂದಿಲ್ಲ. ಹೀಗಾಗಿ ಸೋಲುತ್ತಿದ್ದೇವೆ ಎಂದು ಹೇಳಿದರು.

ಪಕ್ಷದ ಕಾರ್ಯಕರ್ತರು ಸಂಘಟನೆಗೆ ಆದ್ಯತೆ ನೀಡಬೇಕು. ಮನೆ-ಮನೆಗೆ ಹೋಗಬೇಕು. ಆಗ ನಮ್ಮನ್ನು ಯಾರೂ ಸೋಲಿಸಲು ಆಗುವುದಿಲ್ಲ ಎಂದ ಅವರು, ಪಕ್ಷ ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಅಭಿವೃದ್ಧಿಯಲ್ಲಿ ಸಮತೋಲನ ಕಾಪಾಡಿಕೊಳ್ಳಲು ಅನುದಾನ ಒದಗಿಸಿದ್ದೇವೆ. ಇದರಿಂದ ಎಲ್ಲ ವರ್ಗದ ಜನರಿಗೂ ಉಪಯೋಗ ಆಗಿದೆ. ಈಗ ಧೈರ್ಯದಿಂದ ನಾವು ಮತ ಕೇಳಬಹುದು ಎಂದರು.

ಕೇಂದ್ರ ಬಜೆಟ್‌ನಲ್ಲಿ ರೈತರ ಬಗ್ಗೆ ಚಕಾರ ಎತ್ತಲಿಲ್ಲ. ಸಾಲಮನ್ನಾ ಮಾಡಿ ಎಂದು ರೈತರು ಬೇಡಿಕೊಂಡರೂ ಸಾಲಮನ್ನಾ ಮಾಡಿಲ್ಲ. ದೇಶದಲ್ಲಿ 12ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಪ್ರಧಾನಿ ಹಾಗೂ ಹಣಕಾಸು ಸಚಿವರಿಗೆ ರೈತರ ಬಗ್ಗೆ ಕರುಣೆ ಇಲ್ಲ ಎಂದು ಪರಮೇಶ್ವರ್ ವಾಗ್ದಾಳಿ ನಡೆಸಿದರು.

ಮಠಾಧೀಶರ ಬಗ್ಗೆ ನಮಗೆ ಅಪಾರ ಗೌರವವಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಮಗೆ ಹಿಂದುತ್ವ ಹೇಳಿಕೊಡುತ್ತಿದ್ದಾರೆ. ಹಿಂದುತ್ವ ಏನು ಎನ್ನುವುದು ನಮಗೆ ಗೊತ್ತಿದೆ. ಇತರ ಧರ್ಮೀಯರನ್ನು ಜತೆಯಾಗಿ ಕರೆದುಕೊಂಡು ಹೋಗುತ್ತೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News