ರಶ್ಯಾದ 28 ಅಥ್ಲೀಟ್‌ಗಳ ನಿಷೇಧ ಹಿಂದೆಗೆತ

Update: 2018-02-01 18:35 GMT

ಪಿಯೊಂಗ್‌ಚಾಂಗ್, ಫೆ.1: ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಂತೆ ನಿರ್ಬಂಧ ಎದುರಿಸುತ್ತಿರುವ ರಶ್ಯಾದ 28 ಅಥ್ಲೀಟ್‌ಗಳಿಗೆ ವಿಧಿಸಲಾಗಿರುವ ನಿಷೇಧವನ್ನು ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯ ಹಿಂಪಡೆದಿದೆ. ಈ ಮೂಲಕ ರಶ್ಯಾದ ಅಥ್ಲೀಟ್‌ಗಳ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಎ) ಅನುಸರಿಸಿರುವ ನಿಯಮವನ್ನು ತಳ್ಳಿಹಾಕಿದೆ.

ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯ ಗುರುವಾರ ಈ ಮಹತ್ವದ ತೀರ್ಪು ನೀಡಿದ್ದು, 2014ರಲ್ಲಿ ಸೋಚಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಏಳು ಪದಕ ವಿಜೇತರು ಸೇರಿದಂತೆ ಒಟ್ಟು 28 ಅಥ್ಲೀಟ್‌ಗಳು ಉದ್ದೀಪನಾ ಮದ್ದು ತಡೆ ನಿಯಮವನ್ನು ಉಲ್ಲಂಘಿಸಿದ್ದಾರೆಂದು ಸಾಬೀತುಪಡಿಸಲು ಸಾಕಷ್ಟು ದಾಖಲೆಗಳಿಲ್ಲ ಎಂದು ಹೇಳಿದೆ.

ನಿಷೇಧ ಮುಕ್ತವಾಗಿರುವ 28 ಅಥ್ಲೀಟ್‌ಗಳು ಫೆ.9 ರಿಂದ ಆರಂಭವಾಗಲಿರುವ ಪಿಯೊಂಗ್‌ಚಾಂಗ್ ಗೇಮ್ಸ್‌ನಲ್ಲಿ ಪ್ರವೇಶ ಪಡೆಯಲು ಎದುರು ನೋಡುತ್ತಿದ್ದಾರೆ. ಐಒಸಿ ಈಗಾಗಲೇ ರಶ್ಯದ 169 ಅಥ್ಲೀಟ್‌ಗಳಿಗೆ ತಟಸ್ಥ ಧ್ವಜದಡಿ ಪಿಯೊಂಗ್‌ಚೊಂಗ್ ಗೇಮ್ಸ್‌ನಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದೆ. ಕೆಲವರು ಈಗಾಗಲೇ ಸ್ಪರ್ಧಾತ್ಮಕ ಕ್ರೀಡೆಯಿಂದ ನಿವೃತ್ತಿಯಾಗಿದ್ದು ಎಷ್ಟು ಮಂದಿ ಗೇಮ್ಸ್‌ನಲ್ಲಿ ಭಾಗವಹಿಸುತ್ತಾರೆಂದು ಸ್ಪಷ್ಟವಾಗಿಲ್ಲ.

ಸೋಚಿ ಒಲಿಂಪಿಕ್ಸ್‌ನಲ್ಲಿ ಡೋಪಿಂಗ್ ಪ್ರಕರಣದಲ್ಲಿ ಸಿಲುಕಿದ ಆರೋಪದಲ್ಲಿ ಐಒಸಿ ಕಳೆದ ವರ್ಷ ರಶ್ಯದ 43 ಅಥ್ಲೀಟ್‌ಗಳ ಮೇಲೆ ನಿಷೇಧ ಹೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News