ಭಾರತ ಅತಿದೊಡ್ಡ ಆರ್ಥಿಕ ಶಕ್ತಿ: ಜಗದೀಶ್‌ ಶೆಟ್ಟರ್

Update: 2018-02-03 14:24 GMT

ಬೆಂಗಳೂರು, ಫೆ.3: ಪ್ರಧಾನಿ ನರೇಂದ್ರಮೋದಿಯ ಅಪನಗದೀಕರಣ ಹಾಗೂ ಜಿಎಸ್‌ಟಿ ಜಾರಿಯಂತಹ ದಿಟ್ಟ ಕ್ರಮಗಳ ನಂತರ ಭಾರತ 6ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ. ಯಾವುದೇ ಆರ್ಥಿಕ ಜ್ಞಾನವಿಲ್ಲದೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಮಾಡಿರುವ ಆಪಾದನೆ ಕಾಂಗ್ರೆಸ್ ಸರಕಾರದ ಮಾನಸಿಕತೆಯನ್ನು ಪ್ರದರ್ಶಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 13ನೆ ಹಣಕಾಸು ಆಯೋಗದ ನಿಧಿಯಿಂದ ರಾಜ್ಯಕ್ಕೆ ತೆರಿಗೆ ರೂಪದಲ್ಲಿ ಶೇ.32ರಷ್ಟು ಬರುತ್ತಿತ್ತು. ಆದರೆ, 14ನೆ ಹಣಕಾಸು ಆಯೋಗದಿಂದ ಈ ಮೊತ್ತವು ಶೇ.42ಕ್ಕೆ ಹೆಚ್ಚಳವಾಗಿದೆ ಎಂದರು.

2010-15ನೆ ಸಾಲಿನವರೆಗೆ ಒಟ್ಟಾರೆ 89 ಸಾವಿರ ಕೋಟಿ ರೂ.ಬಂದಿದೆ. ಆದರೆ, 14ನೆ ಹಣಕಾಸು ಆಯೋಗದಿಂದ ನಮ್ಮ ರಾಜ್ಯಕ್ಕೆ ಮುಂದಿನ ಐದು ವರ್ಷಗಳಲ್ಲಿ (2015-20) 2,19,445.54 ಕೋಟಿ ರೂ.ಬರಲಿದೆ. ಈ ಅಂಕಿ ಅಂಶಗಳು ದಿನೇಶ್‌ಗುಂಡೂರಾವ್ ಗಮನಕ್ಕೆ ಬಂದಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ಎಷ್ಟು ಹಣವನ್ನು ಖರ್ಚು ಮಾಡಿದ್ದಾರೆ ಎಂಬುದರ ಬಗ್ಗೆ ರಾಜ್ಯ ಸರಕಾರ ಶ್ವೇತಪತ್ರವನ್ನು ಹೊರಡಿಸಬೇಕು. ಕೇಂದ್ರ ಸರಕಾರವು ಸ್ಮಾರ್ಟ್ ಸಿಟಿ ಯೋಜನೆಗಾಗಿ ರಾಜ್ಯಕ್ಕೆ ಬಿಡುಗಡೆ ಮಾಡಿದ 836 ಕೋಟಿ ರೂ.ಗಳಲ್ಲಿ ಕೇವಲ 2 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಲಾಗಿದೆ ಎಂದು ಅವರು ದೂರಿದರು.

ಸೆಂಟ್ರಲ್ ರೋಡ್ ಫಂಡ್(ಸಿಆರ್‌ಎಫ್) ಅಡಿಯಲ್ಲಿ ರಾಜ್ಯಕ್ಕೆ 5 ವರ್ಷಗಳಲ್ಲಿ ಬಿಡುಗಡೆಯಾದ 4 ಸಾವಿರ ಕೋಟಿ ರೂ.ಗಳಲ್ಲಿ ಯಾವುದೇ ಖರ್ಚು ಮಾಡಿಲ್ಲ. ಮುಖ್ಯಮಂತ್ರಿ ಅನ್ನಭಾಗ್ಯ ಯೋಜನೆಗಾಗಿ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಕೇಂದ್ರ ಸರಕಾರವು ಐದು ವರ್ಷಗಳಲ್ಲಿ 1,16,338,84 ಮೆಟ್ರಿಕ್ ಟನ್ ಆಹಾರಧಾನ್ಯ ರಾಜ್ಯಕ್ಕೆ ಬಂದಿದೆ. ಈ ವಿಷಯವನ್ನು ಏಕೆ ಕಾಂಗ್ರೆಸ್‌ನವರು ಹೇಳುವುದಿಲ್ಲ ಎಂದು ಶೆಟ್ಟರ್ ಪ್ರಶ್ನಿಸಿದರು.

ಕಾಂಗ್ರೆಸ್‌ನವರು ಕೇಂದ್ರ ಸರಕಾರದ ಮೇಲೆ ಸುಳ್ಳು ಆಪಾದನೆ ಮಾಡುವುದು ಬಿಟ್ಟು, ಬಂದಿರುವ ಅನುದಾನವನ್ನು ರಾಜ್ಯದ ಅಭಿವೃದ್ಧಿಗೋಸ್ಕರ ಉಪಯೋಗಿಸುವುದು ಒಳ್ಳೆಯದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News