ಕ್ರೈಸ್ತರಿಗೆ ಪ್ರತ್ಯೇಕ ನಿಗಮ ಮಂಡಳಿ ರಚನೆ: ಮುಖ್ಯಮಂತ್ರಿ ಮನವೊಲಿಕೆಗೆ ಐವಾನ್ ಡಿಸೋಜ ಭರವಸೆ

Update: 2018-02-03 14:33 GMT

ಬೆಂಗಳೂರು, ಫೆ.3: ರಾಜ್ಯದಲ್ಲಿರುವ ಕ್ರೈಸ್ತರ ಕಲ್ಯಾಣಕ್ಕಾಗಿ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮಾದರಿಯಲ್ಲಿ ಕ್ರೈಸ್ತರಿಗೆ ಪ್ರತ್ಯೇಕ ನಿಗಮ ಮಂಡಳಿ ರಚಿಸುವಂತೆ ಮುಖ್ಯಮಂತ್ರಿಗಳ ಮನವೊಲಿಸುತ್ತೇನೆ ಎಂದು ವಿಧಾನ ಪರಿಷತ್ತಿನ ಸದಸ್ಯ ಐವಾನ್ ಡಿಸೋಜ ಭರವಸೆ ನೀಡಿದ್ದಾರೆ.

ಶನಿವಾರ ನಗರದ ಕಬ್ಬನ್ ಪಾರ್ಕ್ ಆವರಣದ ಚನ್ನಬಸಪ್ಪ ಸಭಾಂಗಣದಲ್ಲಿ ಕರ್ನಾಟಕ ದಲಿತ ಕ್ರೈಸ್ತರ ಒಕ್ಕೂಟ ಸಮಿತಿ ಆಯೋಜಿಸಿದ್ದ ‘ಕ್ರೈಸ್ತ ಅಭಿವೃದ್ಧ್ಧಿ ಮಂಡಳಿ ಬಜೆಟ್ ಪೂರ್ವ ರಾಜ್ಯಮಟ್ಟದ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ಕ್ರೈಸ್ತರ ಶ್ರೇಯೋಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಮಾಡಿ, ಮನವೊಲಿಸುವುದಾಗಿ ತಿಳಿಸಿದರು.

2011ರಲ್ಲಿ ಸ್ಥಾಪನೆಯಾದ ಕ್ರೈಸ್ತರ ಅಭಿವೃದ್ಧಿ ಪರಿಷತ್ತಿನ ಅನುದಾನ ಹಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲವೆಂದು ಈಗಾಗಲೇ ಸದನದಲ್ಲಿ ಚರ್ಚಿಸಿದ್ದೇನೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಿಟ್ಟಿರುವುದರಿಂದ ಸಮುದಾಯಕ್ಕೆ ಕಡಿಮೆ ಅನುದಾನ ನೀಡಲಾಗುತ್ತಿದೆ. ಅಲ್ಲದೆ, ಅಲ್ಪಸಂಖ್ಯಾತರ ಅನುದಾನದಡಿ ನೀಡುತ್ತಿರುವ ವಿದ್ಯಾರ್ಥಿ ವೇತನ, ಸಾಲ ಸೌಲಭ್ಯಗಳು ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ ಎಂದು ತಿಳಿಸಿದರು.

ಕ್ರೈಸ್ತ ಸಮುದಾಯಕ್ಕೆ ಅಗತ್ಯವಿರುವ ಬೇಡಿಕಗಳನ್ನು ಸಮಾವೇಶದಲ್ಲಿ ಚರ್ಚಿಸಿ, ಬೇಡಿಕೆಗಳ ಯೋಜನಾ ಪಟ್ಟಿಯನ್ನು ಸಿದ್ಧಪಡಿಸಿದರೆ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಮಾಡಿಕೊಡುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ರಾಜ್ಯ ಸಂಚಾಲಕ ಎ.ವಾಲ್ಟರ್, ದಕ್ಷಿಣ ಭಾರತ ಸಂಚಾಲಕ ಡಾ.ಡಿ. ಮನೋಹರಚಂದ್ರ ಪ್ರಸಾದ್, ಮುಖಂಡರಾದ ಸೊಲೊಮನ್, ಜೋಸ್ನಾ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News