ಕಾನೂನು ಸುವ್ಯವಸ್ಥೆ ಕಾಪಾಡಲು ಪರಿಣಾಮಕಾರಿ ಕ್ರಮ: ರಾಜ್ಯಪಾಲ ವಜುಭಾಯಿ ವಾಲಾ

Update: 2018-02-05 13:28 GMT

ಬೆಂಗಳೂರು, ಫೆ.5: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿರುವ ನನ್ನ ಸರಕಾರವು, ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಖಾತರಿಪಡಿಸಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ರಾಜ್ಯದಲ್ಲಿ ಹಠಾತ್ತನೆ ಘಟಿಸುವ ಕೋಮು ಹಿಂಸೆ ಘಟನೆಗಳ ಬಗ್ಗೆ ದೃಢವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಪೊಲೀಸ್ ಇಲಾಖೆಯನ್ನು ವೃತ್ತಿಪರಗೊಳಿಸುವ ಮತ್ತು ಆಧುನೀಕರಣಗೊಳಿಸುವ ಯೋಜನೆಯಡಿಯಲ್ಲಿ, 84 ಪೊಲೀಸ್ ಠಾಣೆಗಳು, 2 ಜಿಲ್ಲಾ ಪೊಲೀಸ್ ಕಚೇರಿ ಸಂಕೀರ್ಣಗಳು, 232 ವಸತಿ ಗೃಹಗಳು, 6 ಜಿಲ್ಲಾ ಪೊಲೀಸ್ ತರಬೇತಿ ಕೇಂದ್ರಗಳು, 10 ಪೊಲೀಸ್ ಉಪ ಠಾಣೆಗಳು, 10 ಬ್ಯಾರಕ್‌ಗಳು, 6 ಶಸ್ತ್ರಾಗಾರಗಳು ಮತ್ತು ಇತರೆ 46ಕ್ಕಿಂತ ಹೆಚ್ಚಿನ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.

ನಂತರ ಮಾತನಾಡಿದ ಸಿ.ಎಂ ಸಿದ್ದರಾಮಯ್ಯ, ಸಬ್‌ಬೀಟ್ ವ್ಯವಸ್ಥೆ, ಡಯಲ್ 100 ತುರ್ತು ಸ್ಪಂದನ ವ್ಯವಸ್ಥೆಯ ವಿಸ್ತರಣೆ ಮತ್ತು ಗಸ್ತು ವಾಹನಗಳ ಹೆಚ್ಚಳದ ಮೂಲಕ ಸಾರ್ವಜನಿಕರನ್ನು ಒಳಗೊಂಡ ನಾಗರಿಕ ಕೇಂದ್ರಿತ ಪೊಲೀಸಿಂಗ್‌ಗೆ ಹೆಚ್ಚಿನ ಬಲವನ್ನು ಒದಗಿಸಲಾಗಿದೆ. ಪೊಲೀಸ್ ಠಾಣೆಗಳನ್ನು ನಾಗರಿಕ ಸ್ನೇಹಿಯನ್ನಾಗಿ ಮಾಡುವುದಕ್ಕೆ ಜನಸ್ನೇಹಿ ಯೋಜನೆಯಡಿಯಲ್ಲಿ 760 ಪೊಲೀಸ್ ಠಾಣೆಗಳಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

29,684 ಪೊಲೀಸ್ ಪೇದೆ, ಆರಕ್ಷಕ ಉಪ ನಿರೀಕ್ಷಕರು ಮತ್ತು ಇತರ ಲಿಪಿಕ ಸಿಬ್ಬಂದಿಯ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲಾಗಿದೆ. 2017-18ರಲ್ಲಿ 11 ಸಾವಿರಕ್ಕಿಂತ ಹೆಚ್ಚು ಪೊಲೀಸ್ ಪೇದೆ ಮತ್ತು ಮುಖ್ಯ ಪೊಲೀಸ್ ಪೇದೆಗಳಿಗೆ ಭಡ್ತಿ ನೀಡಲಾಗಿದೆ. 2017-18ರ ಅವಧಿಯಲ್ಲಿ ಒಟ್ಟು 1,733 ವಸತಿ ಗೃಹಗಳನ್ನು ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳಲ್ಲಿ ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ 1,989 ಹುದ್ದೆಗಳನ್ನು ಮತ್ತು ಕಾರಾಗೃಹ ಇಲಾಖೆಯಲ್ಲಿ 1,995 ಹುದ್ದೆಗಳನ್ನು ಮಂಜೂರು ಮಾಡಿದೆ. 112 ಸರಕಾರಿ ಅಭಿಯೋಜಕರ ಹುದ್ದೆಗಳನ್ನು ಸೃಷ್ಟಿಸಲಾಗಿದ್ದು, 229 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಜಿಲ್ಲಾ ಕಾರಾಗೃಹಗಳಲ್ಲಿ ಸಿ.ಸಿ.ಟಿವಿಗಳನ್ನು ಅಳವಡಿಸುವ ಕಾರ್ಯ ಮಾಡಲಾಗಿದೆ ಮತ್ತು 9 ಕಾರಾಗೃಹಗಳನ್ನು 25 ನ್ಯಾಯಾಲಯಗಳೊಂದಿಗೆ ಸಂಪರ್ಕಿಸಲು ವಿಡಿಯೋ ಕಾನ್ಫರೆನ್ಸ್ ನಡೆಸುವ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ಭ್ರಷ್ಟಾಚಾರದ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯಾದಾಗಿನಿಂದ 278 ಟ್ರ್ಯಾಪ್ ಪ್ರಕರಣಗಳು, 65 ದಾಳಿ ಪ್ರಕರಣಗಳು ಮತ್ತು 61 ಇತರೆ ಪ್ರಕರಣಗಳು ಸೇರಿ ಒಟ್ಟು 404 ಪ್ರಕರಣಗಳು ದಾಖಲಾಗಿವೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯಾದಾಗಿನಿಂದ ಸರಕಾರವು ಸ್ವೀಕರಿಸಿದ 106 ಪ್ರಕರಣಗಳಲ್ಲಿ, 72 ಪ್ರಕರಣಗಳಲ್ಲಿ ಅಭಿಯೋಜನಾ ಮಂಜೂರಾತಿ ಆದೇಶವನ್ನು ಹೊರಡಿಸಲಾಗಿದೆ. ಜಿಲ್ಲಾ ಮಟ್ಟ, ತಾಲೂಕು ಮಟ್ಟ ಮತ್ತು ಗ್ರಾಮ ಮಟ್ಟದಲ್ಲಿ, ಕಾಲಕಾಲಕ್ಕೆ ಜನ ಸಂಪರ್ಕ ಸಭೆಗಳನ್ನು ನಡೆಸುವುದರ ಮೂಲಕ ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯವೈಖರಿಯ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಲಾಗಿದೆ. ದೂರುಗಳನ್ನು ಸ್ವೀಕರಿಸಿದ ನಂತರ ವಿಳಂಬವಿಲ್ಲದಂತೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

'ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ನೀರಿಗಾಗಿ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿಕೊಳ್ಳುವಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸುವಲ್ಲಿನ ತನ್ನ ಬದ್ಧತೆಯನ್ನು ಸರಕಾರ ಪುನರುಚ್ಚರಿಸುತ್ತದೆ. ಅಲ್ಲದೆ, ಮಹಾದಾಯಿ ಜಲಾನಯನ ಪ್ರದೇಶದಿಂದ ನಮ್ಮ ಜನರಿಗೆ ಹಕ್ಕಿನ ಪಾಲನ್ನು ದೊರಕಿಸುವಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಸರಕಾರ ಮುಂದುವರೆಸುತ್ತದೆ'.
-ವಜುಭಾಯಿ ವಾಲಾ, ರಾಜ್ಯಪಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News