×
Ad

ಗೋ ಮಾಂಸ ಸೇವನೆ ಬಗ್ಗೆ ದೇಶವ್ಯಾಪಿ ಅನಗತ್ಯ ಚರ್ಚೆ: ಮಣಿಶಂಕರ್ ಅಯ್ಯರ್

Update: 2018-02-05 19:41 IST

ಬೆಂಗಳೂರು, ಫೆ.5: ಗೋ ಮಾಂಸ ಸೇವನೆ ಬಗ್ಗೆ ದೇಶವ್ಯಾಪಿ ಅನಗತ್ಯ ಚರ್ಚೆಯಾಗುತ್ತಿದೆ. ಆದರೆ, ಶಿಲಾಯುಗದಲ್ಲಿ ಮಾಂಸಾಹಾರ ಸೇವನೆ ಎಲ್ಲಾ ಸಮುದಾಯಗಳಿಗೆ ಸಾಮಾನ್ಯವಾಗಿತ್ತು. ಆಹಾರ ಸೇವನೆ ವೈಯಕ್ತಿಕ ಹಕ್ಕು. ಹೀಗಾಗಿ, ಮಾಂಸಾಹಾರದ ಕುರಿತಾದ ಚರ್ಚೆಗಳು ಅನಗತ್ಯ. ಇದನ್ನೇ ಕೆಲವರು ರಾಜಕೀಯ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಹೇಳಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯ ಕಟ್ಟಡದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ(ಎಸ್‌ಐಒ) ಆಯೋಜಿಸಿದ್ದ, ‘ನಮ್ಮದು ಬಹುತ್ವ ಸಂಸ್ಕೃತಿ’ ಕುರಿತ ಸಂವಾದ ಉದ್ದೇಶಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಭಾರತ ಮಾತ್ರ ಬಹುತ್ವ ಸಂಸ್ಕೃತಿ ಹೊಂದಿದ ದೇಶವಾಗಿದೆ. ಎಲ್ಲ ಧರ್ಮ, ಜಾತಿಗಳು ಸಹೋದರತ್ವದಿಂದ ಸಮಾಜದಲ್ಲಿ ಒಂದುಗೂಡಿ ಬದುಕಿದರೆ ವಿವಿಧತೆಯಲ್ಲಿ ಏಕತೆ ಹೊಂದಬಹುದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಂಘ-ಸಂಸ್ಥೆಗಳು ಸೌಹಾರ್ದತೆ ಬೆಳೆಸಲು ಮುಂದಾಗಬೇಕು ಎಂದರು.

ದೇವರು ಒಬ್ಬ ನಾಮ ಹಲವು ಎಂಬ ಸಂದೇಶವನ್ನು ಎಲ್ಲ ಧರ್ಮದ ಜನರು ಅರಿತುಕೊಳ್ಳುವುದು ಅತ್ಯವಶ್ಯಕವಾಗಿದೆ. ದೇವರನ್ನು ಸ್ಮರಣೆ ಮಾಡಲು ದೇವಸ್ಥಾನಗಳಿಗೆ ಹೋಗಬೇಕೆಂದೇನಿಲ್ಲ. ಮನಸ್ಸಿನ ಭಾಷೆಯ ಮೂಲಕ ದೇವರ ಸ್ಮರಣೆ ಮಾಡಬಹುದು ಎಂದರು.

ದೇಶದಲ್ಲಿ ಬಹು ಸಂಸ್ಕೃತಿ ಅಳವಡಿಸಿಕೊಳ್ಳಲು ವಿಫಲವಾಗಿರುವುದರಿಂದ ಕೋಮು ಸಂಘರ್ಷಗಳು ಹೆಚ್ಚುತ್ತಿದ್ದು, ಶಾಂತಿ ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ಸಾವಿರ ವರ್ಷಗಳ ಹಿಂದೆ ಕರುನಾಡು ಸಾಂಸ್ಕೃತಿಕವಾಗಿ ಶ್ರೀಮಂತವಾಗಿತ್ತು. ಶ್ರವಣಬೆಳಗೊಳ, ಶ್ರೀರಂಗಪಟ್ಟಣ, ಅಜಂತ ಎಲ್ಲೋರ ಇದಕ್ಕೆ ಸಾಕ್ಷಿ. ಕಲೆ ಮತ್ತು ವಾಸ್ತು ಶಿಲ್ಪದ ಬಗ್ಗೆ ಅಧ್ಯಯನ ಅಗತ್ಯ. ಆದರೆ, ಆಧುನಿಕ ಯುಗದಲ್ಲಿ ಇದಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಮಣಿಶಂಕರ ಅಯ್ಯರ್ ನುಡಿದರು.

ಎಸ್‌ಐಒ ರಾಜ್ಯಾಧ್ಯಕ್ಷ ಮುಹಮ್ಮದ್ ರಫೀಕ್ ಮಾತನಾಡಿ, ದೇಶದಲ್ಲಿ ಬಹುಸಂಸ್ಕ್ರತಿ ಅಳವಡಿಸಿಕೊಳ್ಳಲು ಜಾತಿ, ಧರ್ಮ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಅಲ್ಲದೆ, ವಿವಿಧ ರಾಜ್ಯಗಳಲ್ಲಿನ ಸಾಂಪ್ರದಾಯಿಕ ತತ್ವಗಳು ಇದಕ್ಕೆ ಅಡ್ಡಿಯಾಗುತ್ತಿವೆ. ಮಹಾತ್ಮ ಗಾಂಧಿಜೀಯವರ ಬಹುತ್ವದ ಅನುಷ್ಠಾನದ ಚಿಂತನೆಯನ್ನು ಯುವಕರು ಸಾಕಾರಗೊಳಿಸಬೇಕು ಎಂದು ತಿಳಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಅಂಕುರಾ ಆಸ್ಪತ್ರೆ ನಿರ್ದೇಶಕ ಡಾ.ಮುಹಮ್ಮದ್ ತಾಹ ಮತೀನ್, ಎಸ್‌ಐಒ ಕಾರ್ಯದರ್ಶಿ ಡಾ.ನಯೀಂ ಅಹಮದ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News