ನನಗೂ ಅಲ್ಪಸಂಖ್ಯಾತರ ಮುಖಂಡನೆಂದು ಶ್ರದ್ಧಾಂಜಲಿ ಸಲ್ಲಿಸಬೇಡಿ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದೇಕೆ ?
ಬೆಂಗಳೂರು, ಫೆ. 5: ‘ಮುಸ್ಲಿಂ ಮುಖಂಡರು ನಿಧನರಾದ ಸಂದರ್ಭದಲ್ಲಿ ಅವರನ್ನು ಅಲ್ಪಸಂಖ್ಯಾತರ ಮುಖಂಡರೆಂಬ ಪದ ಬಳಸಿ ಸಂತಾಪ ಸೂಚಿಸುವುದು ನಿಲ್ಲಬೇಕು. ನಾಳೆ ನಾನು ಮೃತಪಟ್ಟಾಗಲಾದರೂ ಅಲ್ಪಸಂಖ್ಯಾತರ ಮುಖಂಡನೆಂದು ಶ್ರದ್ಧಾಂಜಲಿ ಸಲ್ಲಿಸುವುದು ಬೇಡ’ ಎಂದು ಮೇಲ್ಮನೆ ಸದಸ್ಯ ಸಿ.ಎಂ.ಇಬ್ರಾಹೀಂ ಆಗ್ರಹಿಸಿದ ಸ್ವಾರಸ್ಯಕರ ಪ್ರಸಂಗ ನಡೆಯಿತು.
ಸೋಮವಾರ ವಿಧಾನ ಪರಿಷತ್‌ನಲ್ಲಿ ಸಭಾಪತಿ ಶಂಕರಮೂರ್ತಿ ಸಂತಾಪ ಸೂಚನೆ ನಿರ್ಣಯ ಮಂಡಿಸಿದ ಬಳಿಕ ಮಾತನಾಡಿದ ಇಬ್ರಾಹೀಂ, ಮಾಜಿ ಶಾಸಕಿ ಮುಖ್ತಾರುನೀಸಾ ಬೇಗಂ ಅವರಿಗೆ ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಎಂದು ಉಲ್ಲೇಖಿಸಲಾಗಿದೆ. ಈ ಹಿಂದೆ ಮಾಜಿ ಸಚಿವ ಖಮರುಲ್ ಇಸ್ಲಾಂ ರಿಗೆ ಶ್ರದ್ಧಾಂಜಲಿ ಅರ್ಪಿಸುವ ವೇಳೆಯೂ ಅಲ್ಪಸಂಖ್ಯಾತರ ಮುಖಂಡರೆಂಬ ಪದ ಬಳಕೆ ಮಾಡಲಾಗಿತ್ತು. ಅವರು ಅಲ್ಪಸಂಖ್ಯಾತರ ಮುಖಂಡರಲ್ಲ, ಬದಲಿಗೆ ಸಮಾಜದ ಮುಖಂಡರೆಂದು ಕರೆಯಬೇಕೆಂದು ಸಲಹೆ ನೀಡಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ‘ನಾನು ಇಲ್ಲಿ ಇರುವ ಸಂದರ್ಭದಲ್ಲೇ ನಿಮಗೆ ಶ್ರದ್ಧಾಂಜಲಿ ಸಲ್ಲಿಸುವಂತಹ ಸ್ಥಿತಿ ಬಾರದಿರಲಿ. ಯಾವುದೇ ವೇಳೆಯಲ್ಲೂ ನೀವು ಅಂತಹ ಸಂದರ್ಭವನ್ನು ತಂದುಕೊಳ್ಳಬೇಡಿ’ ಎಂದು ಚಟಾಕಿ ಹಾರಿಸಿದರು.
ಇದಕ್ಕೆ ತುಪ್ಪ ಬೆರೆಸುವ ರೀತಿಯಲ್ಲಿ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ‘ಸಿ.ಎಂ.ಇಬ್ರಾಹೀಂ ಅವರು ಸಾವಿನಲ್ಲೂ ಸಮಾನತೆ ಬಯಸುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸುವ ಮೂಲಕ ಸದನದಲ್ಲಿ ನಗೆಯ ಅಲೆ ಸೃಷ್ಟಿಸಿದರು.
ಸಾಯೋ ಕಾಲದಲ್ಲಿ ಮೀನು ತಿನ್ನಬೇಡಿ
‘ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಧಾನಿ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಟೀಕಿಸದಿದ್ದರೆ, ತಿಂದ ಅನ್ನ ಜೀರ್ಣ ಆಗಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಈ ವಿಷಯದಲ್ಲಿ ಸಜ್ಜನರಾಗಿದ್ದರು. ಅವರಿವರ ಮಾತು ಕೇಳಿ ಸಾಯೋ ಕಾಲದಲ್ಲಿ ಮೀನು ತಿನ್ನ ಹೊರಟಿದ್ದಾರೆ.’
-ಕೆ.ಎಸ್.ಈಶ್ವರಪ್ಪ ವಿರೋಧಪಕ್ಷದ ನಾಯಕ, ವಿಧಾನಪರಿಷತ್
ಹಿಂದಿ ಭಾಷಣಕ್ಕೆ ಖಂಡನೆ
‘ರಾಜ್ಯಪಾಲರು ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದ್ದನ್ನು ಖಂಡಿಸುತ್ತೇನೆ. ವಿಧಾನಮಂಡಲದಲ್ಲಿ ಹಿಂದಿ ಭಾಷೆಯ ಅಗತ್ಯವೆ ಇರಲಿಲ್ಲ. ಹಾಗೂ ಭಾಷಣ ಪ್ರತಿಗಳನ್ನು ಹಿಂದಿಯಲ್ಲಿಯೇ ಕೊಟ್ಟಿದ್ದು ಸಲ್ಲ.’
-ರಮೇಶ್‌ಬಾಬು ವಿಧಾನ ಪರಿಷತ್ ಸದಸ್ಯ