ಎಸ್ಸಿ-ಎಸ್ಟಿ, ಹಿಂ.ವರ್ಗ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬದ್ಧ: ರಾಜ್ಯಪಾಲ

Update: 2018-02-05 14:51 GMT

ಬೆಂಗಳೂರು, ಫೆ. 5: ‘ನನ್ನ ಸರಕಾರ ರಾಜ್ಯದಲ್ಲಿನ ಪರಿಶಿಷ್ಟರ ಕಲ್ಯಾಣಕ್ಕೆ ಆದ್ಯತೆ ನೀಡಿದ್ದು, ಅವರ ಸಮಗ್ರ ಅಭಿವೃದ್ಧಿಗೆ 2017-18ರಲ್ಲಿ 27,703 ಕೋಟಿ ರೂ. ಅನುದಾನ ನೀಡಿದ್ದು, ಎಸ್ಸಿಪಿ-ಟಿಎಸ್ಪಿ ಅಡಿ ಹಲವು ಯೋಜನೆಗಳನ್ನು ರೂಪಿಸಿದೆ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.

ಸೋಮವಾರ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಎಸ್ಸಿ-ಎಸ್ಟಿ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಿಕೊಡಲು 663 ವಸತಿ ಶಾಲೆಗಳು ಮತ್ತು ಕಾಲೇಜುಗಳನ್ನು ನಡೆಸಲಾಗುತ್ತಿದೆ. ಪ್ರಸ್ತುತ ಈ ಶಾಲೆಗಳಲ್ಲಿ 1.05ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 103 ವಸತಿ ಶಾಲಾ ಸಂಕೀರ್ಣಗಳು ನಿರ್ಮಾಣಗೊಳ್ಳುತ್ತಿವೆ ಹಾಗೂ 800 ಕೋಟಿ ರೂ.ಅಂದಾಜು ವೆಚ್ಚದಲ್ಲಿ 55ಶಾಲಾ ಸಂಕೀರ್ಣಗಳಿಗೆ ಅನುಮೋದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ನಿಗಮಗಳ 20,133 ಕೋಟಿ ರೂ. ವಿವಿಧ ಯೋಜನೆಗಳಿಂದ ಒಟ್ಟಾರೆ 84.60 ಲಕ್ಷಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದಿದ್ದಾರೆ ಎಂದರು.

ಅಲ್ಪಸಂಖ್ಯಾತರ ಅಭಿವೃದ್ಧಿಯು ನನ್ನ ಸರಕಾರದ ಪ್ರಮುಖ ದೃಷ್ಟಿಕೋನವಾಗಿದೆ. ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು, ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಉನ್ನತಿಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. 3.80 ಲಕ್ಷ ಫಲಾನುಭವಿಗಳಿಗೆ 1,089 ಕೋಟಿ ರೂ.ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.

‘ಪ್ರತಿ ಮಗುವು ಶಾಲೆಗೆ ಹೋಗಿ ಚೆನ್ನಾಗಿ ಓದಬೇಕು’ ಎಂಬ ಧ್ಯೇಯದೊಂದಿಗೆ ಶಿಕ್ಷಣದ ಸಂವಿಧಾನಾತ್ಮಕ ಹಕ್ಕನ್ನು ಸಫಲಗೊಳಿಸಲು ಶ್ರಮಿಸುತ್ತಿದೆ. ಎಲ್ಲ ಮಕ್ಕಳು ಶಾಲೆಗೆ ಪ್ರವೇಶ ಪಡೆದು ಹಾಜರಾಗುವ ಸಲುವಾಗಿ ಶಾಲೆಗಳಲ್ಲಿ ಉಚಿತ ಪಠ್ಯ ಪುಸ್ತಕಗಳು, ಮಧ್ಯಾಹ್ನದ ಬಿಸಿ ಊಟ, ಹಾಲು, ಬೈಸಿಕಲ್‌ಗಳು, ಸಮವಸ್ತ್ರಗಳು ಮತ್ತು ಶೂಗಳನ್ನು ಒದಗಿಸಲಾಗುತ್ತಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 125ನೆ ಜನ್ಮ ದಿನಾಚರಣೆಯ ಸಂದರ್ಭದಲ್ಲ್ಲಿ, ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಸ್ಥಾಪಿಸಲಾಗಿದೆ. ಸರಕಾರಿ ಪ್ರಥಮ ದರ್ಜೆಯ ಕಾಲೇಜು, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳ 31,742 ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ತರಿಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ, 5ಲಕ್ಷ ಜನರಿಗೆ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಗುರಿ ಹೊಂದಿದೆ. ಕೌಶಲ್ಯಾಭಿವೃದ್ಧಿ ಒದಗಿಸುವುದಕ್ಕಾಗಿ ಇಲ್ಲಿಯವರೆಗೆ, 7.63ಲಕ್ಷ ಅಭ್ಯರ್ಥಿಗಳು, 4,495 ತರಬೇತಿ ಕೇಂದ್ರಗಳು ಮತ್ತು 1,742 ತರಬೇತಿ ಸೇವೆ ಒದಗಿಸುವ ಸಂಸ್ಥೆಗಳನ್ನು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ನೋಂದಾಯಿಸಲಾಗಿದೆ. 3.17 ಲಕ್ಷ ಯುವಜನರಿಗೆ ತರಬೇತಿ ಆದೇಶಗಳನ್ನು ನೀಡಲಾಗಿದೆ. ಅವುಗಳಲ್ಲಿ 1.23 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ ಮತ್ತು 74,476 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಒದಗಿಸಲಾಗಿದೆ ಎಂದು ಅವರು ಅಂಕಿ-ಅಂಶಗಳನ್ನು ನೀಡಿದರು.

ಕೆಎಸ್ಸಾರ್ಟಿಸಿ, ಬಿಎಂಟಿಸಿ ದೇಶದಲ್ಲಿಯೇ ಅತ್ಯುತ್ತಮವಾಗಿದ್ದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳನ್ನು ಹಾಗೂ ಪ್ರಶಸ್ತಿಗಳನ್ನು ಗಳಿಸಿವೆ. ಕರ್ನಾಟಕಕ್ಕೆ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ನೀಡುವುದಕ್ಕಾಗಿ 207 ಪ್ರಶಸ್ತಿಗಳೊಂದಿಗೆ ಮನ್ನಣೆ ಪಡೆದುಕೊಂಡಿವೆ. ಕೆಎಸ್ಸಾರ್ಟಿಸಿ ರಾಷ್ಟ್ರದಲ್ಲಿಯೇ ‘ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ’ಯನ್ನು ಗಳಿಸಿರುವ ಏಕೈಕ ನಿಗಮವಾಗಿದೆ ಎಂದು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News