ಬೆಂಗಳೂರಿನಲ್ಲಿ ಬೈಸಿಕಲ್ ಬಳಕೆ ವ್ಯವಸ್ಥೆ ಜಾರಿ: ರಾಜ್ಯಪಾಲ ವಜುಭಾಯಿ ವಾಲಾ

Update: 2018-02-05 15:00 GMT

ಬೆಂಗಳೂರು, ಫೆ. 5: ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಮೈಸೂರಿನಲ್ಲಿ ಆರಂಭಿಸಲಾಗಿರುವ ಬೈಸಿಕಲ್ ಬಳಕೆ ವ್ಯವಸ್ಥೆಯನ್ನು ಶೀಘ್ರವೇ ಬೆಂಗಳೂರಿನಲ್ಲಿಯೂ ಆರಂಭಿಸಲಾಗುವುದು ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದ್ದಾರೆ.

ಸೋಮವಾರ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಂಚಾರಿ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೋ 1ನೆ ಹಂತದ ಕಾಮಗಾರಿ ಆರಂಭವಾಗಿದೆ. 2ನೆ ಹಂತದ 72 ಕಿ.ಮೀ. ಮಾರ್ಗ 2021ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ಬೆಂಗಳೂರು ಮೆಟ್ರೋ ಪಾಲಿಟನ್ ಪ್ರದೇಶಕ್ಕೆ ಉಪನಗರ ರೈಲನ್ನು ಪರಿಚಯಿಸಲು ರೈಲ್ವೆ ಮಂತ್ರಾಲಯಕ್ಕೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ 407 ಎಕರೆ ಪ್ರದೇಶದಲ್ಲಿ ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. 1,440 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದರು.

ತ್ಯಾಜ್ಯ ನೀರು ಶುದ್ಧೀಕರಣ: 2020ರ ಅಂತ್ಯದ ವೇಳೆಗೆ ಬೆಂಗಳೂರು ನಗರದ ತ್ಯಾಜ್ಯ ನೀರನ್ನು ನೀರನ್ನು ಸಂಪೂರ್ಣ ಶುದ್ಧೀಕರಿಸಿ ಮರುಬಳಕೆ ಮಾಡಲಾಗುವುದು ಎಂದ ಅವರು, ತ್ಯಾಜ್ಯ ನೀರಿನ ಶುದ್ಧೀಕರಣದಿಂದ ಮಾತ್ರ ಬೆಂಗಳೂರಿನ ಕೆರೆಗಳ ಸಂರಕ್ಷಣೆ ಸಾಧ್ಯ. ಪ್ರತಿದಿನ ಬೆಂಗಳೂರಿನಲ್ಲಿ 84.6ಕೋಟಿ ಲೀ.ತ್ಯಾಜ್ಯ ನೀರನ್ನು ಶುದ್ಧೀಕರಿಸುವ 18 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 21.1ಕೋಟಿ ಲೀ.ತ್ಯಾಜ್ಯ ನೀರನ್ನು ಶುದ್ಧೀಕರಿಸುವ 6 ಘಟಕಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಲಾಗಿದೆ. ಜತೆಗೆ ಇನ್ನೂ 46ಕೋಟಿ ಲೀ.ತ್ಯಾಜ್ಯ ನೀರನ್ನು ಶುದ್ಧೀಕರಿಸುವ 4 ಹೆಚ್ಚುವರಿ ಘಟಕಗಳನ್ನು 1,203 ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದರು.

ಹಸಿವು ಮುಕ್ತ: ಕರ್ನಾಟಕವನ್ನು ‘ಹಸಿವು ಮುಕ್ತ ರಾಜ್ಯ’ವನ್ನಾಗಿ ಮಾಡಲು ‘ಅನ್ನಭಾಗ್ಯ’ ಯೋಜನೆ ಜಾರಿಗೊಳಿಸಲಾಗಿದೆ. ಪ್ರತಿವ್ಯಕ್ತಿಗೆ ನೀಡುವ ಅಕ್ಕಿಯ ಪ್ರಮಾಣವನ್ನು 7 ಕಿಲೋಗೆ ಹೆಚ್ಚಿಸಿದ್ದೇವೆ. 30ಲಕ್ಷ ಮನೆಗಳಿಗೆ ಉಚಿತ ಅನಿಲ ಸಂಪರ್ಕ ಸಹಿತ ಒಂದು ಗ್ಯಾಸ್ ಸ್ಟವ್, ಸಿಲಿಂಡರ್ ಒದಗಿಸುವ ‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ’ ಪ್ರಾರಂಭಿಸಿದ್ದೇವೆ ಎಂದರು.

ಬೆಂಗಳೂರಿನಲ್ಲಿನ 198 ಇಂದಿರಾ ಕ್ಯಾಂಟೀನ್‌ಗಳಿಗೆ ಸಾರ್ವಜನಿಕರಿಂದ ಬಂದ ಉತ್ತಮ ಪ್ರತಿಕ್ರಿಯೆಯನ್ನು ಪರಿಗಣಿಸಿ, ನಗರದ ಬಡಜನರು ಮತ್ತು ದುಡಿಯುವ ವರ್ಗದ ಜನರಿಗೆ ಕೈಗೆಟಕುವ ಬೆಲೆಯಲ್ಲಿ, ಉಪಾಹಾರ ಮತ್ತು ಊಟ ಒದಗಿಸಲು, ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ 247 ಇಂದಿರಾ ಕ್ಯಾಂಟೀನುಗಳನ್ನು ತೆರೆಯಲಾಗುತ್ತಿದೆ ಎಂದು ತಿಳಿಸಿದರು.

‘2018ರ ಮಾರ್ಚ್‌ನಲ್ಲಿ ರಾಜ್ಯದ 2 ಕೋಟಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯಾಗಲಿದ್ದು, 13 ಸಾವಿರ ಘಟಕಗಳು ಕಾರ್ಯಾರಂಭದ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಿದ ಸಾಧನೆ ನಮ್ಮ ಸರಕಾರದ್ದು’
-ವಜುಭಾಯಿ ವಾಲಾ ರಾಜ್ಯಪಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News