×
Ad

ರಾಜ್ಯದ ಕಾರಾಗೃಹಗಳಲ್ಲಿ 48 ಕೈದಿಗಳ ಸಾವು: ಹೈಕೋರ್ಟ್‌ಗೆ ಸರಕಾರದ ವರದಿ

Update: 2018-02-05 20:41 IST

ಬೆಂಗಳೂರು, ಫೆ.5: ರಾಜ್ಯದ ಕಾರಾಗೃಹಗಳಲ್ಲಿ 2012 ರಿಂದ 2017ರ ಅ.31ರವರೆಗೆ 48 ಮಂದಿ ಕೈದಿಗಳು ಅಸಹಜವಾಗಿ ಸಾವನ್ನಪ್ಪಿದ್ದರೆ, 31 ಪ್ರಕರಣಗಳು ಬಾಕಿಯಿದ್ದು, 1 ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರಕಾರ ವರದಿ ಸಲ್ಲಿಸಿದೆ.

ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸರಕಾರಿ ಪರ ವಕೀಲರು ಜೈಲುಗಳಲ್ಲಿ ಕೈದಿಗಳು ಅಸಹಜವಾಗಿ ಸಾವನ್ನಪ್ಪಿರುವುದರ ಬಗ್ಗೆ ವಿಭಾಗೀಯ ನ್ಯಾಯಪೀಠಕ್ಕೆ ವರದಿ ಸಲ್ಲಿಸಿದರು.

ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪಿಐಎಲ್ ಸಲ್ಲಿಸಿದ್ದು, ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸುತ್ತಿದೆ.

ಪ್ರಕರಣವೇನು: ದೇಶದ ಕಾರಾಗೃಹಗಳಲ್ಲಿ ಹೆಚ್ಚಾಗುತ್ತಿರುವ ಕೈದಿಗಳ ಅಸಹಜ ಸಾವಿನ ಪ್ರಕರಣಗಳನ್ನು ಪರಿಗಣಿಸಿದ್ದ ಸುಪ್ರೀಂಕೋರ್ಟ್, ಇಂತಹ ಸಾವುಗಳನ್ನು ತಡೆಗಟ್ಟುವ, ಮೃತ ಕೈದಿಗಳ ಕುಟುಂಬಕ್ಕೆ ಪರಿಹಾರ ಒದಗಿಸುವ ಹಾಗೂ ಜೈಲು ಸುಧಾರಣೆಗೆ ಕ್ರಮ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶಿಸಿತ್ತು. ಅಲ್ಲದೆ ಎಲ್ಲಾ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಪತ್ರ ಬರೆದಿದ್ದ ಸುಪ್ರೀಂಕೋರ್ಟ್ ಸೆಕ್ರೆಟರಿ ಜನರಲ್, ಈ ಕುರಿತು ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಸೂಚಿಸಿದ್ದರು. ಈ ಪತ್ರವನ್ನು ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿತ್ತು.

ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, 2012ರಿಂದ 2017ರ ಅ.31ರ ಅವಧಿಯಲ್ಲಿ ಅಸಹಜವಾಗಿ ಸಾವನ್ನಪ್ಪಿರುವ ಕೈದಿಗಳ ಸಂಖ್ಯೆ, ಮೃತರ ಹೆಸರು ಮತ್ತವರ ಕುಟುಂಬ ಸದಸ್ಯರಿಗೆ ನೀಡಲಾಗಿರುವ ಪರಿಹಾರದ ಕುರಿತು ವಿವರ ಸಂಗ್ರಹಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಮಧುಸೂದನ್ ನಾಯ್ಕ ಅವರಿಗೆ ಸೂಚಿಸಿತ್ತು.

ವರ್ಷ-ಅಸಹಜ ಸಾವು ಪ್ರಕರಣಗಳು
2012- 9
2013 - 3
2014-15
2015- 9
2016 -5
2017-7
ಒಟ್ಟು-48

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News