‘ಪಕೋಡ’ ಹೇಳಿಕೆ: ಮೋದಿಯವರಿಗೆ ಬೀದಿ ವ್ಯಾಪಾರಿಗಳ ಒಕ್ಕೂಟದ ಬಹಿರಂಗ ಪತ್ರ

Update: 2018-02-06 10:45 GMT

ಮಾನ್ಯ ಪ್ರಧಾನ ಮಂತ್ರಿಗಳೇ,

ಇತ್ತೀಚಿಗೆ ನಡೆದ ಟಿ.ವಿ ಸಂದರ್ಶನವೊಂದರಲ್ಲಿ, ಪಕೋಡ ಮಾರಿ ದಿನವೊಂದಕ್ಕೆ ರೂ. 200 ಸಂಪಾದಿಸುವವನು ಸಹ ಉದ್ಯೋಗಿ ಎಂದು ತಾವು  ಸಮರ್ಥಿಸಿಕೊಂಡಿದ್ದೀರಾ. ಬಹಳಷ್ಟುಜನ ನಿಮ್ಮ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ನೀವು ನೀಡಿದ್ದ ಆಶ್ವಾಸನೆ ಹಾಸ್ಯಾಸ್ಪದವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಇಂಥಹಾ ಸಂದರ್ಭದಲ್ಲಿ ನಾವುಗಳು, ತಾವು ಬೀದಿ ವ್ಯಾಪಾರವನ್ನು ಒಂದು ಉದ್ಯೋಗ ಎಂಬುದಾಗಿ ಗುರುತಿಸಿರುವುದನ್ನು ಪ್ರಶಂಸಿಸುತ್ತೇವೆ. ಆದರೆ ತಾವು ನೀಡಿರುವ ಹೇಳಿಕೆಯಲ್ಲಿ ಬೀದಿ ವ್ಯಾಪಾರಿಗಳ ಕಠಿಣ ಬದುಕಿನ ವಾಸ್ತವತೆಯು ಕಾಣುತ್ತಿಲ್ಲ.

ಬೀದಿ ವ್ಯಾಪಾರವು ಒಂದು ಸ್ವತಂತ್ರ ಮತ್ತು ಗೌರವಯುತವಾದ ಕಸುಬಾಗಿರುತ್ತದೆ. ನಾವು ಬೀದಿ ವ್ಯಾಪಾರಿಗಳಾಗಿರುವುದಕ್ಕೆ ಹೆಮ್ಮೆಯಾಗುತ್ತದೆ. ಆದರೂ ನಾವು ಯಾವ ಸನ್ನಿವೇಶದಲ್ಲಿ ಬೀದಿ ವ್ಯಾಪಾರಿಗಳಾದೆವು ಎಂಬುದನ್ನು ಮರೆಯುವುದಕ್ಕೆ ಆಗುವುದಿಲ್ಲ. ನಗರ ಪ್ರದೇಶಗಳಿಗೆ ವಲಸೆ ಬಂದು ಅನುಭವಿಸಿದ ಸಂಕಷ್ಟಗಳು, ಹಳ್ಳಿಗಳಲ್ಲಿ ಬರ, ಕೃಷಿ ಬಿಕ್ಕಟ್ಟು ಹಾಗು ಅತಿ ಮುಖ್ಯವಾದ ಸಮಸ್ಯೆಯೆಂದರೆ ನಿರುದ್ಯೋಗ–ಈ ಎಲ್ಲಾ ಸಮಸ್ಯೆಗಳಿಂದ ನಾವು ಇಂದು ಬೀದಿ ವ್ಯಾಪಾರಿಗಳಾಗಿದ್ದೇವೆ. ಇದನ್ನು ಹೊರತುಪಡಿಸಿದರೆ ಇಂದು ದೇಶದಲ್ಲಿ ಶಿಕ್ಷಣವು ಬಡ ಜನರಿಗೆ ಕೈಗಟುಕುವಂತಿಲ್ಲ. ಶಿಕ್ಷಣಕ್ಕಾಗಿ ಕಾಯ್ದಿರಿಸಿರುವ ಅಂದಾಜು ಆಯವ್ಯಯದಲ್ಲಿ ಈ ಬಾರಿ ಅತಿ ಕಡಿಮೆ ಮೊತ್ತವನ್ನು ಕಾಯ್ದಿರಿಸಲಾಗಿದೆ. ಇದರಿಂದಾಗಿ ಇನ್ನು ಅತೀ ಜನರು ಶಿಕ್ಷಣವನ್ನು  ಕಳೆದುಕೊಳ್ಳುತ್ತಿದ್ದಾರೆ. ಈ ಜನದ ಬಡಜನರು ಶಿಕ್ಷಣವನ್ನು ಪಡೆದುಕೊಳ್ಳಲು ಆಗುವುದಿಲ್ಲ. ಇಂತಹ ಸಂದರ್ಭ ಗೌರವಯುತವಾಗಿ ಬೀದಿವ್ಯಾಪಾರ ಮಾಡಿಕೊಂಡು ಜೀವನ ಮಾಡೋಣಾ ಎಂದರೆ , ನಮಗೆ ಸರ್ಕಾರದ ಪ್ರಾಧಿಕಾರ ಮತ್ತು ಇಲಾಖೆಗಳಿಂದ ಎತ್ತಂಗಡಿ ಜೊತೆಗೆ ಅನೇಕ ರೀತಿಯ ಕಿರುಕುಳವನ್ನು ಪ್ರತಿನಿತ್ಯ ಅನುಭವಿಸಬೇಕಾಗುತ್ತದೆ.

ಬೀದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಮತ್ತು ನಿಯಂತ್ರಣ ) ಕಾಯ್ದೆ, 2014 ಯುಪಿಎ ಸರಕಾರದ ಅವಧಿಯಲ್ಲಿ ಜಾರಿಯಾಗಿರುತ್ತದೆ. ಆದರೆ ಈ ಕಾಯ್ದೆಯನ್ನು ಕೆಲವು ರಾಜ್ಯಗಳು ಮಾತ್ರ ಅನುಷ್ಠಾನಗೊಳಿಸಿರುತ್ತದೆ. ಈ ಕಾಯ್ದೆಯು ಬೀದಿ ವ್ಯಾಪಾರಿಗಳಿಗೆ ಜೀವನೋಪಾಯದ ಹಕ್ಕನ್ನು ನೀಡಿದೆ, ನಮಗೆ ಆಗುತಿದ್ದಂತಹ ಕಿರುಕುಳಗಳಿಂದ ಮುಕ್ತಿಯನ್ನು ನೀಡುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಹೀಗಿದ್ದರೂ ಸಹ ನಮ್ಮನ್ನು ಸಾರ್ವಜನಿಕ ಸ್ಥಳಗಳಿಂದ ಹೊರದೂಕಲಾಗುತ್ತದೆ, ಪೋಲಿಸರು ಹಫ್ತಾ ವಸೂಲಿ ಮಾಡುತ್ತಾರೆ, ಸ್ಥಳೀಯ ಆಡಳಿತ ಮಂಡಳಿಗಳು ಎತ್ತಂಗಡಿಯ ಬೆದರಿಕೆ ಹಾಕುತ್ತಾರೆ. ಶ್ರೀಮಂತ ನಿವಾಸಿಗಳು ನಮ್ಮನ್ನು 'ಕೊಳಕರು' ಎಂದು ಜರಿಯುತ್ತಾರೆ ಮತ್ತು ಎತ್ತಂಗಡಿಗೆ ಬಲವಂತಪಡಿಸುತ್ತಾರೆ. ಸಂಚಾರ ದಟ್ಟಣೆ ನಮ್ಮಿಂದಲೇ ಹೆಚ್ಚಾಗುತ್ತದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿರುತ್ತಾರೆ ಮತ್ತು ಇತರೆ ಆಧಾರವಿಲ್ಲದ ಸುಳ್ಳು ಆರೋಪಗಳನ್ನು ನಮ್ಮ ಮೇಲೆ ಮಾಡುತ್ತರೆ. ಈ ಕಾಯ್ದೆ ಬಂದು ನಾಲ್ಕು ವಷರ್ಗಳು ಕಳೆದಿವೆ. ಹಾಗೆಯೇ ತಾವುಗಳು ಪ್ರಧಾನ ಮಂತ್ರಿಗಳಾಗಿಯೂ ಸಹ ಅಷ್ಟೇ ಸಮಯ ಆಗಿದೆ. ನೀವು ಬೀದಿ ವ್ಯಾಪಾರವನ್ನು ಒಂದು ಗೌರವಯುತವಾದ ಉದ್ಯೋಗ ಎಂದು ಭಾವಿಸಿದ್ದೇ ಆದರೆ ನಾವು ಏಕೆ ಇನ್ನೂ ಸಹ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ?. ದೆಹಲಿಯ ಲೆಫ್ಟಿನೆಂಟ್ ರಾಜ್ಯಪಾಲರು ಬೀದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಜಾರಿಗೊಂಡಿರುವ 2014 ರ ಕಾಯ್ದೆಯನ್ನು ಉಲ್ಲಂಘಿಸಿ, ಬೀದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುತ್ತಿರುವ ದೇಶದಲ್ಲಿರುವ ಯಾವುದೇ ಪ್ರಾಧಿಕಾರದ ವಿರುದ್ಧ ಏಕೆ ಇಲ್ಲಿಯ ತನಕ ಯಾವುದೇ ಕ್ರಮ ತೆಗೆದುಕೊಂಡಿಲ್ಲ?. ಪ್ರಧಾನ ಮಂತ್ರಿಗಳೇ, ನಮಗಾಗಿ ತಾವು ಏನು ಮಾಡಿದ್ದೀರಾ?.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ತಾವು ವಿರೋಧ ಪಕ್ಷದಲ್ಲಿದ್ದು, ಭಾವೋದ್ವೇಗದಿಂದ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ವಿರೋಧಿಸಿದ್ದೀರಾ– ವಾಲ್ ಮಾರ್ಟ್ ಮತ್ತು ಟಾರ್ಗೆಟ್ ಕಂಪನಿಗಳು ಭಾರತ ದೇಶವನ್ನು ಪ್ರವೇಶ ಮಾಡುವುದಕ್ಕೆ ತಾವು ವ್ಯಕ್ತ ಪಡಿಸಿರುತ್ತೀರಾ. ಆದರೂ ತಾವುಗಳು ಈಗ ನೂರರಷ್ಟು ಒಂದೇ ಬ್ರಾಂಡ್ ನ ಚಿಲ್ಲರೆ ವ್ಯಾಪಾರಕ್ಕೆ ಮಂಜೂರಾತಿಯನ್ನು ನೀಡಿದ್ದೀರಾ. ಇದು ಖಂಡಿತಾ ನಮ್ಮನ್ನು ಒಳಗೊಂಡಂತೆ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯನ್ನುಂಟು ಮಾಡುತ್ತದೆ. ನಿಮ್ಮ ಸ್ಮಾರ್ಟ್ ಸಿಟಿ ಯೋಜನೆಯು ಬೀದಿ ವ್ಯಾಪಾರಿಗಳನ್ನು ಸಂಪೂರ್ಣವಾಗಿ ಎತ್ತಂಗಡಿ ಮಾಡಿಸುತ್ತದೆ ಎಂಬುದನ್ನು ಖಾತರಿ ಪಡಿಸುತ್ತದೆ. ಇದು ಹೇಗೆ ಎಂದರೆ ಗಾಯದ ಮೇಲೆ ಉಪ್ಪು ಸವರಿದಂತೆ ಆಗುತ್ತಿದೆ. ಈ ಯೋಜನೆ ನಮ್ಮ ಜೀವನೋಪಾಯಕ್ಕೆ ಮಾತ್ರ ಧಕ್ಕೆ ನೀಡುವುದಲ್ಲದೆ, ನಮ್ಮ ವಸತಿ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಬೀದಿ ವ್ಯಾಪಾರಿಗಳು ಮತ್ತು ಕೊಳಚೆ ಪ್ರದೇಶಗಳನ್ನು  ಎತ್ತಂಗಡಿ ಮಾಡಿಸುವುದರ ಮತ್ತೊಂದು ಅರ್ಥವೇ ‘ಸ್ಮಾರ್ಟ್ ಸಿಟಿ’ ಯೋಜನೆ. ಮಾನ್ಯರೇ ನಿಮ್ಮ ದೃಷ್ಟಿಕೋನದಲ್ಲಿರುವ ಅಭಿವೃದ್ಧಿ ನಮ್ಮನ್ನು ಒಳಗೊಂಡಿರುವುದಿಲ್ಲ. ಬದಲಾಗಿ , ನಿಮ್ಮ ಯೋಜನೆಯ ನಿಯಮಗಳು ಪ್ರತಿನಿತ್ಯ ವಲಸೆಗಾರರನ್ನು ಸೃಸ್ಟಿಸುತ್ತವೆ. ಬಡತನದಿಂದ ನಮಗೆ ಮುಕ್ತಿ ಇಲ್ಲದಂತಾಗಿದೆ, ಹಾಗಾಗಿ ಎಲ್ಲಿದೆ ನಮ್ಮಗಳ ಅಚ್ಚೇ ದಿನ್?.

ನೀವು ರೂ. 500 ಮತ್ತು 1000 ಮುಖ ಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿದಾಗ, ಅದರಿಂದ ನಮಗೆ ಅತಿ ಹೆಚ್ಚಿನ ತೊಂದರೆ ಉಂಟಾಯಿತು. ನೀವು ಭಾರತವನ್ನು ನಗದು ರಹಿತ ದೇಶವನ್ನಾಗಿ ಮಾಡಲು ಬಯಸಿದ್ದೀರಾ. ಒಂದು ಡಜನ್ ಬಾಳೆಹಣ್ಣು ಖರೀದಿ ಮಾಡಲು ನಮ್ಮ ಗ್ರಾಹಕರು ನಮ್ಮ ಫೋನ್ ಗಳ ಮೂಲಕ ಹಣ ಸಂದಾಯ ಮಾಡುತ್ತಾರೆಂದು ತಾವು ಅಂದುಕೊಂಡಿದ್ದೀರಾ?, ಇದರ ಜೊತೆಗೆ ತಾವು ಜಿ.ಎಸ್.ಟಿ ಯನ್ನು ಜಾರಿ ಮಾಡಿದ್ದೀರಾ. ಇದರಿಂದಾಗಿ ನಮಗೆ ಸಣ್ಣ ಪುಟ್ಟ ಪದಾರ್ಥಗಳನ್ನು ಒದಗಿಸುತ್ತಿದ್ದ ಸಣ್ಣಪುಟ್ಟ ವ್ಯವಹಾರಸ್ಥರು ಸಂಪೂರ್ಣವಾಗಿ ನಾಶವಾಗುತ್ತಿದ್ದಾರೆ. ಮಾನ್ಯರೇ , ಭಾರತದಲ್ಲಿ ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು, ಕೊಳಚೆ ಪ್ರದೇಶ ನಿವಾಸಿಗಳು ಮತ್ತು ಬೀದಿ ವ್ಯಾಪಾರಿಗಳು ಘನತೆಯಿಂದ ಜೀವನ ನಡೆಸಲು ಸಾಧ್ಯವಾಗದಿರುವಂತಹ, ಸ್ಮಾರ್ಟ್ ಸಿಟಿ, ಡಿಜಿಟಲ್ ಇಂಡಿಯಾ , ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ್ ಯೋಜನೆಗಳು ನಮಗೆ ಬೇಕಾಗಿಲ್ಲ! ನಮಗೆ ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ವಸತಿ ಯೋಜನೆಗಳು ಬೇಕು!. ಈ ಎಲ್ಲವನ್ನೂ ದೊರಕಿಸಿಕೊಡಬೇಕಾದ ತಮ್ಮ ಜವಾಬ್ದಾರಿಯನ್ನು ಮತ್ತು ನಮ್ಮ ಹಕ್ಕುಗಳನ್ನು ಖಾಸಗೀಕರಣ ಮಾಡುತ್ತಿದ್ದೀರಾ.

ಹೌದು, ಬೀದಿಯಲ್ಲಿ ಪಕೋಡ ಮಾರುವವನು ಉದ್ಯೋಗಿ. ಆದರೆ ತಾವುಗಳು ಉದ್ಯೋಗ ಸೃಷ್ಟಿ ಮಾಡಲು ವಿಫಲರಾಗಿರುವುದನ್ನು ಮರೆಮಾಚಲು, ಬೀದಿ ವ್ಯಾಪಾರ ಮಾಡಿ ಎಂದು ಉಚಿತ ಸಲಹೆ ನೀಡುವುದು ಸೂಕ್ತವಲ್ಲ ಮತ್ತು ತಾವು ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಭಾರತೀಯರಿಗೆ ನೀಡಿದ್ದ ಆಶ್ವಾಸನೆಯನ್ನು ಈಡೀರಿಸುವುದು ಸೂಕ್ತ. ಇದಕ್ಕೆ ವ್ಯತಿರಿಕ್ತವಾಗಿ, ನಾವು ನಮ್ಮ ಸ್ವಂತ ಬಲದಲ್ಲಿ ನಿಲ್ಲುತ್ತೇವೆ ಮತ್ತು ಶ್ರಮಪಟ್ಟು ದುಡಿಯುತ್ತೇವೆ. ಯಾರಾದರೂ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನ ಪಟ್ಟರೆ ಅದರ ವಿರುದ್ಧ ಹೋರಾಟ ಮಾಡುತ್ತೇವೆ!.

ನಿಮ್ಮ ವಿಶ್ವಾಸಿಗಳು,

ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿಗಳ ಒಕ್ಕೂಟ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News