ರಾಜ್ಯಪಾಲರ ಹಿಂದಿ ಭಾಷಣ ರಾಜ್ಯಕ್ಕೆ ಅಗೌರವ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2018-02-06 12:55 GMT

ಬೆಂಗಳೂರು, ಫೆ.6: ರಾಜ್ಯಪಾಲ ವಜುಭಾಯಿ ವಾಲಾ ಜಂಟಿ ಅಧಿವೇಶನ ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದ್ದು ರಾಜ್ಯಕ್ಕೆ ಅಗೌರವ ತರುವಂತಿತ್ತು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.

ಮಂಗಳವಾರ ಡಾ.ನೆಲ್ಸನ್ ಮಂಡೇಲಾ ಅಭಿಮಾನಿಗಳ ವೇದಿಕೆ ನಗರದ ಟೌನ್ ಮುಂಭಾಗ ಆಯೋಜಿಸಿದ್ದ ‘ಪ್ರತಿ ಸೆಲೂನ್‌ಗೆ ಕಾಂಗ್ರೆಸ್ ಯಾತ್ರೆ ಸವಿತಾ ಸಮಾಜದ ಅಭಿವೃದ್ಧಿಗೆ’ ಎಂಬ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಪಾಲರು ದ್ವಿಭಾಷಾ ನಿಯಮದಂತೆ ಇಂಗ್ಲಿಷ್‌ನಲ್ಲಿ ಮಾತನಾಡಬಹುದಿತ್ತು. ಆದರೆ, ಉದ್ದೇಶಪೂರ್ವಕವಾಗಿ ಹಿಂದಿಯಲ್ಲಿ ಭಾಷಣ ಮಾಡಿ ಅವಮಾನ ಮಾಡಿದ್ದಾರೆ ಎಂದು ವಿಷಾದಿಸಿದರು.

ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಏಕ ಭಾಷೆ, ಏಕ ಸಂಸ್ಕೃತಿಯನ್ನು ಜಾರಿ ಮಾಡಲು ಹೊರಟಿದ್ದಾರೆ. ಅವರ ತಾಳಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಕುಣಿಯುತ್ತಿದ್ದಾರೆ. ಆ ಮೂಲಕ ಪ್ರಾದೇಶಿಕ ಭಾಷೆಗಳ ಘನತೆ, ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

2015 ಹಾಗೂ 2017ರಲ್ಲಿ ಬ್ಯಾಂಕ್ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ರಾಜ್ಯಕ್ಕೆ 17ಸಾವಿರ ಹುದ್ದೆಗಳು ಸಿಗಬೇಕಿತ್ತು. ಆದರೆ, ಕೇವಲ 840 ಹುದ್ದೆಗಳು ಮಾತ್ರ ಸಿಕ್ಕಿವೆ. ಹೀಗೆ ಹಂತ, ಹಂತವಾಗಿ ಎಲ್ಲ ವ್ಯವಸ್ಥೆಗಳಲ್ಲಿಯೂ ಹಿಂದಿ ಭಾಷಿಕರನ್ನು ತುಂಬುವಂತಹ ಕೆಟ್ಟ ಆಡಳಿತ ವ್ಯವಸ್ಥೆಗೆ ಕೇಂದ್ರ ಸರಕಾರ ಮುಂದಾಗಿದೆ ಎಂದು ಅವರು ಕಿಡಿಕಾರಿದರು.

ಹಿಂದಿ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರಲು ಹೊರಟಿರುವ ಕೇಂದ್ರ ಸರಕಾರದ ಕ್ರಮವನ್ನು ಸಮರ್ಥವಾಗಿ ಎದುರಿಸಬೇಕಾದರೆ ದ್ರಾವಿಡ ಭಾಷೆಗಳ ಒಕ್ಕೂಟ ರಚಿಸಬೇಕಾದ ಅಗತ್ಯವಿದೆ. ಈ ಬಗ್ಗೆ ಶೀಘ್ರವೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಅಧ್ಯಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News