×
Ad

ಮಾನವ ಕಳ್ಳ ಸಾಗಾಣಿಕೆಯಲ್ಲಿ ಭಾರತ ಪ್ರಥಮ: ಲೀಲಾ ಸಂಪಿಗೆ ಆತಂಕ

Update: 2018-02-06 18:30 IST

ಬೆಂಗಳೂರು, ಫೆ.6: ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ 16 ವರ್ಷದೊಳಗಿನ ಮಕ್ಕಳ ಮಾರಾಟ, ಸಾಗಾಣಿಕೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳ ಹೋರಾಟಗಾರ್ತಿ ಡಾ. ಲೀಲಾ ಸಂಪಿಗೆ ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಕನ್ನಡಭವನದ ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ‘ದೇಸಿ ಕಮ್ಮಟ, ಲೋಕ ಕಾಣದ ಲೋಕ’ ಕಾರ್ಯಕ್ರಮದಲ್ಲಿ ಮಹಿಳೆಯರ ಕಳ್ಳ ಸಾಗಾಣಿಕೆ ಮತ್ತು ಕಚೇರಿಗಳಲ್ಲಿ ವಿಶಾಖಾ ಗೈಡ್‌ಲೈನ್ಸ್ ಅಳವಡಿಕೆ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯಾವುದೇ ಅಡೆತಡೆಗಳಿಲ್ಲದೆ, ದೇಶದ ಮೂಲೆ ಮೂಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿದೆ. ಇದರಲ್ಲಿ ಹೆಚ್ಚಾಗಿ ಮಕ್ಕಳು ಬಲಿಯಾಗುತ್ತಿದ್ದಾರೆ. ಅದಲ್ಲದೆ, ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕಾದವರೇ ಈ ಬಹುದೊಡ್ಡ ಜಾಲದ ವಾರಸುದಾರರಾಗಿದ್ದಾರೆ. ಹೀಗಾಗಿ, ಈ ಜಾಲವನ್ನು ಭೇದಿಸುವುದು ಸುಲಭದ ಮಾತಲ್ಲ ಎಂದು ಹೇಳಿದರು.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳು ಬಹುದೊಡ್ಡ ಮಾರಾಟದ ಸರಕಾಗಿದ್ದಾರೆ. ಈ ಜಾಲವನ್ನು ಭೇದಿಸದಿದ್ದಲ್ಲಿ, ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಇನ್ನು ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ನುಡಿದರು.

ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳಲ್ಲಿ ಶೇಕಡ 80ಕ್ಕೂ ಹೆಚ್ಚು ಮಂದಿ ವೇಶ್ಯಾವಾಟಿಕೆ ದಂಧೆಗೆ ದೂಡಲ್ಪಡುತ್ತಿದ್ದಾರೆ. ಇನ್ನುಳಿದಂತೆ ಜೀತಪದ್ಧತಿಗೆ, ಸಲಿಂಗಕಾಮಕ್ಕೆ, ಒಂಟೆ ರೇಸ್‌ಗಳಿಗೆ ಬಳಕೆಯಾಗುತ್ತಿದ್ದಾರೆ. ಲೈಂಗಿಕ ವೃತ್ತಿ ಮಹಿಳೆಯರಿಂದ ದೇಶಕ್ಕೆ ವಾರ್ಷಿಕವಾಗಿ 600 ರಿಂದ 840 ಕೋಟಿ ರೂ. ಆದಾಯವಿದೆ. ಆದಾಯ ತೆಗೆದು ಕೊಳ್ಳುವ ಮನಸ್ಸುಗಳಿಗೆ ಮಡಿವಂತಿಕೆ ಇರುವುದಿಲ್ಲ ಎಂದ ಅವರು, ಮಾನವೀಯತೆ, ಮನುಷ್ಯರ ಸಂಬಂಧ, ಹಕ್ಕುಗಳ ಬಗ್ಗೆ ಮಾತನಾಡುವ ದೇಶದ ಒಬ್ಬನಾದರೂ ಮಾರಾಟ-ಸಾಗಾಟ ಜಾಲವನ್ನು ಬುಡ ಸಮೇತ ಕಿತ್ತು ಹಾಕಲು ಹೋರಾಟ ಮಾಡಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News