ರಾಜ್ಯ ಸರಕಾರದಿಂದಲೇ ಹೊರ ವರ್ತುಲ ರಸ್ತೆ ನಿರ್ಮಾಣ: ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು, ಫೆ. 6: ತುಮಕೂರು ರಸ್ತೆಯಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 65 ಕಿ.ಮೀ ಹೊರ ವರ್ತುಲ ರಸ್ತೆ ನಿರ್ಮಿಸಲು ಕೇಂದ್ರ ಮುಂದಾಗದಿದ್ದರೆ, ರಾಜ್ಯ ಸರಕಾರದಿಂದಲೇ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಪಕ್ಷೇತರ ಸದಸ್ಯ ಸುಬ್ಬಾರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ತುಮಕೂರು ರಸ್ತೆಯ ಎನ್‌ಎಚ್-4, ಎನ್‌ಎಚ್-7 ಮೂಲಕ ಹಾದುಹೋಗುವ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ 2007-08ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, ಈ ಯೋಜನೆ ನೆನೆಗುದಿಗೆ ಬಿದ್ದಿರುವುದರಿಂದ ರೈತರಿಗೆ ತೊಂದರೆಯಾಗಿರುವುದು ನಿಜ ಎಂದು ಒಪ್ಪಿಕೊಂಡರು.
ಈ ರಸ್ತೆಗೆ 1,810 ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. 2016ರಲ್ಲಿ ಈ ಬಗ್ಗೆ ಕೇಂದ್ರಕ್ಕೆ ರಾಜ್ಯ ಸರಕಾರ ಪತ್ರ ಬರೆದು ರಸ್ತೆ ನಿರ್ಮಾಣ ಮಾಡಲು ಕೋರಿದರೂ ಕ್ರಮ ಕೈಗೊಂಡಿಲ್ಲ. ಮತ್ತೊಮ್ಮೆ ಕೇಂದ್ರದ ಗಮನಕ್ಕೆ ತಂದು ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
ರಸ್ತೆ ಅಗಲೀಕರಣ: ನಗರದ ಮಲ್ಲೇಶ್ವರದ 8ನೆ ಮುಖ್ಯರಸ್ತೆಯಿಂದ ತುಮಕೂರು ರಸ್ತೆ ಕಡೆಗೆ ಮತ್ತು ಸರ್ ಸಿ.ವಿ.ರಾಮನ್ ರಸ್ತೆಯಿಂದ 8ನೆ ಮುಖ್ಯರಸ್ತೆಗೆ ಎಡತಿರುವು ನೀಡಲು ರಸ್ತೆ ಅಗಲೀಕರಣಕ್ಕೆ ಕ್ರಮ ವಹಿಸಲಾಗುವುದು ಎಂದು ಜಾರ್ಜ್, ಬಿಜೆಪಿ ಸದಸ್ಯ ಡಾ.ಅಶ್ವಥ್ ನಾರಾಯಣ ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು.
ಕೆಲವು ಕಡೆ ಭೂಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು, ದೀನದಯಾಳ್ ಉಪಾಧ್ಯಾಯ ಮೇಲ್ಸೇತುವೆ ಇರುವುದರಿಂದ ಯಶವಂತಪುರ ಜಂಕ್ಷನ್‌ನಲ್ಲಿ ವಾಹನ ಸಂಚಾರ ದಟ್ಟಣೆ ಪರಿಶೀಲಿಸಿ ನಗರ ಸಂಚಾರಿ ಪೊಲೀಸರೊಂದಿಗೆ ಜಂಟಿ ಸಭೆ ಕೈಗೊಂಡು ರಸ್ತೆ ಅಗಲೀಕರಣದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.