×
Ad

ರಾಜ್ಯದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ: ರಾಮಲಿಂಗಾರೆಡ್ಡಿ

Update: 2018-02-06 18:38 IST

ಬೆಂಗಳೂರು, ಫೆ.6: ರಾಜ್ಯದ ಜನತೆಗೆ ಅವಮಾನ ಆಗುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಜನತೆಯೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಮಂಗಳವಾರ ಡಾ.ನೆಲ್ಸನ್ ಮಂಡೇಲಾ ಅಭಿಮಾನಿಗಳ ವೇದಿಕೆ ನಗರದ ಟೌನ್ ಮುಂಭಾಗ ಆಯೋಜಿಸಿದ್ದ ‘ಪ್ರತಿ ಸೆಲೂನ್‌ಗೆ ಕಾಂಗ್ರೆಸ್ ಯಾತ್ರೆ ಸವಿತಾ ಸಮಾಜದ ಅಭಿವೃದ್ಧಿಗೆ’ ಎಂಬ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರಕಾರದ ವಿರುದ್ಧ ಆಧಾರ ರಹಿತವಾಗಿ ಅಪಪ್ರಚಾರ ಮಾಡುತ್ತಿರುವ ಬಿಜೆಪಿಗೆ ಜನತೆಯಿಂದಲೇ ಉತ್ತರ ಸಿಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಸಮಾನ ರೀತಿಯಲ್ಲಿ ಪ್ರಾಶಸ್ತ್ಯ ನೀಡಿ, ಅಭಿವೃದ್ಧಿ ಕಾರ್ಯಕ್ರಗಳನ್ನು ಹಮ್ಮಿಕೊಂಡಿದ್ದೇವೆ. ಕಳೆದ 5 ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆಡಳಿತವನ್ನು ಜನತೆ ಒಪ್ಪಿಕೊಂಡಿದ್ದಾರೆ. ಇದನ್ನು ಸಹಿಸಲಾಗದ ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ರಾಜ್ಯ ಸರಕಾರ ಸವಿತಾ ಸಮಾಜದ ಅಭಿವೃದ್ಧಿಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ 1ಎಕರೆ 20ಗುಂಟೆ ಜಮೀನು ನೀಡಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಅಂಗಡಿ ಮಳಿಗೆಗಳನ್ನು ನಿರ್ಮಿಸಲು ಅನುಕೂಲ ಕಲ್ಪಿಸಲಾಗಿದೆ. ಇದನ್ನು ಸಮುದಾಯದ ಮುಖಂಡರು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಳೆದ ವರ್ಷದ ಬಜೆಟ್‌ನಲ್ಲಿ ಸವಿತಾ ಸಮಾಜಕ್ಕೆ 15ಕೋಟಿ ರೂ. ಅನುದಾನ ನೀಡಿದೆ. ಸಲೂನ್‌ಗಳನ್ನು ತೆರೆಯಲು ಸಬ್ಸಿಡಿಯಲ್ಲಿ ಸಾಲ ಹಾಗೂ ಕ್ಷೌರಿಕರಿಗೆ ಕ್ಷೌರಿಕ ಸಲಕರಣೆಗಳುಳ್ಳ ಕಿಟ್‌ಗಳ ಉಚಿತ ವಿತರಣೆ ಮಾಡಲಾಗಿದೆ. ಕಾಂಗ್ರೆಸ್‌ನ ಈ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ‘ಸಮಾಜ ಪ್ರಗತಿ ಕಾಂಗ್ರೆಸ್ ಯಾತ್ರೆ’ ಅಭಿಯಾನ ಪ್ರಾರಂಭಿಸಿರುವುದು ಸಂತೋಷದ ವಿಚಾರವೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಚ್.ಜಿ.ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್, ಕೆಪಿಸಿಸಿ ಕಾರ್ಯದರ್ಶಿ ಮದನ್ ಪಟೇಲ್ ಹಾಗೂ ಡಾ.ನೆಲ್ಸನ್ ಮಂಡೇಲಾ ಅಭಿಮಾನಿಗಳ ವೇದಿಕೆಯ ಅಧ್ಯಕ್ಷ ಎಂ.ಎಸ್.ಮುತ್ತುರಾಜ್, ಪ್ರಧಾನ ಕಾರ್ಯದರ್ಶಿ ಎಂ.ಗುರುರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News