ರಾಜಕೀಯ ಗಿಮಿಕ್‌ಗಾಗಿ ನಾನು ಮಾತನಾಡುವುದಿಲ್ಲ: ಶಿವಲಿಂಗೇಗೌಡ
ಬೆಂಗಳೂರು,ಫೆ.6: ಅಂತರ್ಜಲ ಕುಸಿತದಿಂದ ಬೆಳೆನಷ್ಟಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಯಾವುದೇ ಪರಿಹಾರ ನೀಡಿಲ್ಲ ಎಂದು ಆರೋಪಿಸಿದ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ, ರಾಜಕೀಯ ಗಿಮಿಕ್‌ಗಾಗಿ ತಾನು ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಧಾನಸಭೆ ಕಲಾಪ ಆರಂಭದಲ್ಲೆ ವಿಷಯ ಪ್ರಸ್ತಾಪಿಸಿದ ಅವರು, ತೆಂಗು ಬೆಳೆಗಾರರ ಸಮಸ್ಯೆ ಚರ್ಚೆಗೆ ನಿಲುವಳಿ ಸೂಚನೆಯಡಿ ಅವಕಾಶ ಕಲ್ಪಿಸಬೇಕು ಎಂದು ಕೋರಿದರು. ಏಳು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿ ಇಲ್ಲಿಗೆ ಬಂದಿದ್ದೇನೆ. ತೀವ್ರ ಬರಗಾಲ ಹಾಗೂ ಅಂತರ್ಜಲ ಕುಸಿತದಿಂದ ರಾಜ್ಯದಲ್ಲಿ 44 ಲಕ್ಷ ತೆಂಗಿನ ಮರಗಳು ನಾಶವಾಗಿವೆ. 4,500 ಕೋಟಿ ರೂ.ಆರ್ಥಿಕ ನಷ್ಟ ಉಂಟಾಗಿದೆ. ಕೇರಳದ ಮಾದರಿಯಲ್ಲಿ ರಾಜ್ಯದ ರೈತರಿಗೂ ಪ್ರತಿ ತೆಂಗಿನ ಮರಕ್ಕೆ 8 ಸಾವಿರ ರೂ.ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಸಂಕಷ್ಟಕ್ಕೆ ಸಿಲುಕಿರುವ ರೈತರು ನಿರಂತರ ಪ್ರತಿಭಟನೆ ನಡೆಸಿದರೂ, ಕೇಂದ್ರ ಹಾಗೂ ರಾಜ್ಯ ಸರಕಾರ ಈ ವಿಷಯವನ್ನು ಕಿವಿಯ ಮೇಲೆ ಹಾಕಿಕೊಳ್ಳುತ್ತಿಲ್ಲ. ಪ್ರಧಾನಿ ಮೋದಿ ಅವರ ಬಳಿಗೂ ನಿಯೋಗ ಕೊಂಡೊಯ್ಯಲಿಲ್ಲ. ರೈತರ ಬಗ್ಗೆ ನಿರ್ಲಕ್ಷ ಧೋರಣೆ ಸರಿಯಲ್ಲ ಎಂದು ಆಕ್ಷೇಪಿಸಿದರು.