ಕಾರ್ಕಳ ನಗರ ಒಳಚರಂಡಿ ವ್ಯವಸ್ಥೆ ಮರು ನಿರ್ಮಾಣ: ಸಚಿವ ರೋಷನ್ ಬೇಗ್

Update: 2018-02-06 13:28 GMT

ಬೆಂಗಳೂರು, ಫೆ. 6: ಉಡುಪಿ ಜಿಲ್ಲೆ ಕಾರ್ಕಳ ನಗರದ ಒಳಚರಂಡಿ ವ್ಯವಸ್ಥೆ ಮರು ನಿರ್ಮಾಣಕ್ಕೆ 140 ಕೋಟಿ ರೂ.ಗಳ ಅಗತ್ಯವಿದೆ. ಆದರೆ, ರಾಜ್ಯದಲ್ಲಿ ತ್ಯಾಜ್ಯ ಸಂಸ್ಕರಣೆ ಮತ್ತು ನಿರ್ವಹಣೆ ಯೋಜನೆ ಜಾರಿ ತಂದಿದ್ದು, ಉಡುಪಿ ಜಿಲ್ಲಾಧಿಕಾರಿಗಳು 4.35 ಕೋಟಿ ರೂ.ಅನುದಾನ ಮಂಜೂರಿಗೆ ಕೋರಿದ್ದು, ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕಾರ್ಕಳ ನಗರದಲ್ಲಿ ಒಳಚರಂಡಿ ವ್ಯವಸ್ಥೆ 1993ರಲ್ಲಿ ಚಾಲನೆಗೊಳಿಸಿದ್ದು, 25ವರ್ಷಗಳಷ್ಟು ಹಳೆಯದಾಗಿದ್ದು, ಪಟ್ಟಣದ ಜನಸಂಖ್ಯೆಯೂ ಹೆಚ್ಚಾಗಿದೆ.
ಪ್ರಸ್ತುತ ಒಳಚರಂಡಿ ವ್ಯವಸ್ಥೆ ಮರು ನಿರ್ಮಾಣಕ್ಕೆ ಕ್ರಮ ವಹಿಸಿದ್ದು, ಈಗಾಗಲೇ ಉಡುಪಿ ಜಿಲ್ಲಾಧಿಕಾರಿ ಹಾಗೂ ಪೌರಾಡಳಿತ ಇಲಾಖೆ ನಿರ್ದೇಶಕರು 4.35 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಲು ಕೋರಿದ್ದಾರೆ. ಅದರನ್ವಯ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಿ ಸ್ಥಳೀಯ ಸಂಸ್ಥೆಗಳ ಲೆಕ್ಕ ಶೀರ್ಷಿಕೆಯಡಿ ಲಭ್ಯವಾಗುವ ಅನುದಾನದಲ್ಲಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ರೋಷನ್‌ಬೇಗ್ ತಿಳಿಸಿದರು.

ಸಾಂಕ್ರಾಮಿಕ ರೋಗದ ಆತಂಕ ತಪ್ಪಿಸಿ: ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸುನೀಲ್ ಕುಮಾರ್, ಒಳಚರಂಡಿ ಅವ್ಯವಸ್ಥೆಯಿಂದ ಕುಡಿಯುವ ನೀರಿನ ತ್ಯಾಜ್ಯ ನೀರು ಸೇರಿದ ಪರಿಣಾಮ ಕಾರ್ಕಳ ನಗರದಲ್ಲಿ ಸಾಂಕ್ರಾಮಿಕ ರೋಗದ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News