ತ್ರಿವಳಿ ತಲಾಕ್: ಶಿಕ್ಷೆ ರದ್ದುಗೊಳಿಸಲು ಒತ್ತಾಯಿಸಿ ಧರಣಿ

Update: 2018-02-06 13:34 GMT

ಬೆಂಗಳೂರು, ಫೆ.6: ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಯಲ್ಲಿ ತ್ರಿವಳಿ ತಲಾಕ್ ನೀಡಿದ ವ್ಯಕ್ತಿಗೆ ವಿಧಿಸಿರುವ ಮೂರು ವರ್ಷ ಜೈಲು ಶಿಕ್ಷೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮುಸ್ಲಿಂ ಮಹಿಳಾ ಆಂದೋಲನ ಆಗ್ರಹಿಸಿದೆ.

ಮಂಗಳವಾರ ನಗರದ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಕರ್ನಾಟಕ ಮುಸ್ಲಿಂ ಮಹಿಳಾ ಆಂದೋಲನದ ನೂರಾರು ಸದಸ್ಯರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆಂದೋಲನ ಅಧ್ಯಕ್ಷೆ ನಗ್ಮಾಶೇಕ್, ಮುಸ್ಲಿಮರಲ್ಲಿ ಮೂರು ಬಾರಿ ತಲಾಕ್ ಹೇಳಿದ ತಕ್ಷಣವೇ ವೈವಾಹಿಕ ಸಂಬಂಧವನ್ನು ಕಳೆದುಕೊಳ್ಳುವುದನ್ನು ಶಿಕ್ಷೆಗೊಳಪಡಿಸಲು ತ್ರಿವಳಿ ತಲಾಕ್ ಮಸೂದೆಯನ್ನು ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದೆ ಎಂದರು.

ಮುಸ್ಲಿಮ್ ವ್ಯಕ್ತಿ ಮೌಖಿಕವಾಗಿ, ಬರವಣಿಗೆ ಮೂಲಕ, ಇ-ಮೇಲ್, ಎಸ್‌ಎಂಎಸ್ ಅಥವಾ ವಾಟ್ಸಾಪ್ ನಲ್ಲಿ ತ್ರಿವಳಿ ತಲಾಕ್ ಸಂದೇಶ ಕಳಿಸುವುದು ಕಾನೂನುಬಾಹಿರ. ಆದರೆ, ತ್ರಿವಳಿ ತಲಾಕ್ ಘೋಷಿಸಿದ ಪತಿಗೆ 3 ವರ್ಷ ಜೈಲುವಾಸ ಹಾಗೂ ದಂಡ ವಿಧಿಸಿರುವುದು ಸರಿಯಲ್ಲ. ಈ ಕೂಡಲೇ ಅದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಮಸೂದೆಯಲ್ಲಿ ಶಿಕ್ಷೆಗೊಳಗಾದ ವ್ಯಕ್ತಿ ಸರಕಾರದ ಸೌಲಭ್ಯಗಳಿಂದ ವಂಚಿತನಾಗುತ್ತಾನೆ. ಇದರಿಂದ ಅವನಿಗೆ ಮತ್ತು ಅವರ ಕುಟುಂಬಕ್ಕೆ ತೊಂದರೆಯಾಗುತ್ತದೆ. ಸಮಾಜದಲ್ಲಿ ಅತ್ಯಾಚಾರ ಮಾಡಿದ ವ್ಯಕ್ತಿಗೆ ಕಾನೂನಿನಲ್ಲಿ ಜಾಮೀನು ದೊರೆಯುತ್ತದೆ. ಆದರೆ, ತಲಾಕ್ ನೀಡಿದ ವ್ಯಕ್ತಿಗೆ ಕಾನೂನಿನಲ್ಲಿ ಜಾಮೀನು ನೀಡಲಾಗುವುದಿಲ್ಲ ಎಂದು ವಿವರಿಸಿದರು.

ಸಂವಿಧಾನ ವಿರೋಧಿ ಮಸೂದೆಯನ್ನು ನಾವು ಧಿಕ್ಕರಿಸುತ್ತೇವೆ. ಇಸ್ಲಾಮ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದವರು ಸಮುದಾಯಕ್ಕೆ ನಿರ್ಬಂಧ ಹೇರಲು ಹೊರಟಿದ್ದಾರೆ. ಇದು ಖಂಡನೀಯ ಎಂದು ನಗ್ಮಾಶೇಖ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News