ವಿದ್ಯುತ್ ಸಮಸ್ಯೆ ಬಗೆಹರಿಸಲು 10 ಲಕ್ಷ ಟನ್ ಕಲ್ಲಿದ್ದಲು ಆಮದು: ಶಿವಕುಮಾರ್

Update: 2018-02-06 13:38 GMT

ಬೆಂಗಳೂರು, ಫೆ 6: ಬೇಸಿಗೆಯಲ್ಲಿ ವಿದ್ಯುತ್ ಅಭಾವವನ್ನು ತಡೆಗಟ್ಟಲು ಬೇರೆ ಕಡೆಯಿಂದ 10 ಲಕ್ಷ ಟನ್ ಕಲ್ಲಿದ್ದಲ್ಲನ್ನು ಆಮದು ಮಾಡಿಕೊಳ್ಳಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಎನ್.ಎಸ್.ಬೋಸ್‌ರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಕಲ್ಲಿದ್ದಲು ಸಚಿವಾಲಯವು ರಾಜ್ಯಕ್ಕೆ ಪೂರೈಸುವ ಕಲ್ಲಿದ್ದಲನ್ನು ಸಕಾಲದಲ್ಲಿ ತಲುಪಿಸಿಲ್ಲ. ಬೇಸಿಗೆಯಲ್ಲಿ ವಿದ್ಯುತ್ ಅಭಾವ ಆಗದಂತೆ ರಾಜ್ಯ ಸರಕಾರವೇ ಮುನ್ನೆಚ್ಚರಿಕೆ ಕ್ರಮವಾಗಿ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಿದೆ. ಅಲ್ಲದೆ, 10 ಲಕ್ಷ ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳುವ ಸಂಬಂಧ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. ಒಂದು ವಾರದೊಳಗೆ ಆದೇಶ ಪತ್ರವನ್ನು ವಿತರಿಸಲಾಗುವುದೆಂದು ತಿಳಿಸಿದರು.

ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಘಟಕಗಳಿಗೆ ಬೇಕಾಗಿರುವ ಕಲ್ಲಿದ್ದಲನ್ನು ಪೂರೈಸುವಂತೆ ಕೇಂದ್ರ ಸರಕಾರದ ಮೇಲೂ ಒತ್ತಡ ಹೇರಲಾಗುವುದು ಎಂದು ಅವರು ತಿಳಿಸಿದರು.

ಕೆ. ಪ್ರತಾಪಚಂದ್ರ ಶೆಟ್ಟಿ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಡಿ.ಕೆ. ಶಿವಕುಮಾರ್, ದೀನ ದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಅನುಷ್ಠಾನಕ್ಕೆ ಶೀಘ್ರ ಸಂಪರ್ಕ ವಿದ್ಯುತ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News