ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಪ್ರಧಾನಿ ಜೊತೆಗೆ ಮಾತುಕತೆ ನಡೆಸುತ್ತೇನೆ: ಎಚ್.ಡಿ.ದೇವೇಗೌಡ
ಬೆಂಗಳೂರು, ಫೆ.6: ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿ ಸಂಬಂಧ ಮಾತುಕತೆ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಸಮಯಾವಕಾಶ ಕೇಳಿದ್ದು, ಅನುಮತಿ ಸಿಕ್ಕ ಕೂಡಲೇ ಹೊಸದಿಲ್ಲಿಗೆ ತೆರಳಿ ಮಾತುಕತೆ ನಡೆಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಹೈಕೋರ್ಟ್ ಮುಂಭಾಗದ ಗೋಲ್ಡನ್ ಜ್ಯುಬಿಲಿ ದ್ವಾರದಲ್ಲಿ ವಕೀಲರ ಸಂಘ ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹ ಸ್ಥಳ್ಕಕೆ ಅವರು ಭೇಟಿ ನೀಡಿ ವಕೀಲರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಧರಣಿ ನಿರತ ವಕೀಲರನ್ನುದ್ದೇಶಿಸಿ ಮಾತನಾಡಿದ ದೇವೇಗೌಡ, ಫೋನ್ ಮೂಲಕ ಸಮಸ್ಯೆ ಪರಿಹರಿಸುವ ಕಾಲ ಹೋಗಿದೆ. ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಫೋನ್ ಮೂಲಕ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಿದ್ದೆ. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ, ಖುದ್ದಾಗಿ ಭೇಟಿ ಮಾಡಿಯೇ ಮಾತುಕತೆ ನಡೆಸಬೇಕು. ಹೀಗಾಗಿ, ಭೇಟಿಗೆ ಸಮಯಾವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿದ್ದೇನೆ. ಇಂದು ಸಮಯ ನೀಡಿದರೂ ಸರಿ, ನಾಳೆ ನೀಡಿದರೂ ಸರಿ, ನಾನು ಹೊಸದಿಲ್ಲಿಗೆ ತೆರಳಿ ನ್ಯಾಯಮೂರ್ತಿಗಳ ನೇಮಕ ಸಂಬಂಧ ಮಾತುಕತೆ ನಡೆಸುತ್ತೇನೆ ಎಂದರು.
ರಾಷ್ಟ್ರಪತಿಗಳು ಬೆಂಗಳೂರಿಗೆ ಬರುತ್ತಿದ್ದಾರೆ. ನಾನು ಕೂಡ ರಾಷ್ಟ್ರಪತಿಗಳಿಗೆ ಮನವಿ ಪತ್ರ ನೀಡಲಿದ್ದೇನೆ. ರಾಷ್ಟ್ರಪತಿಗಳೊಂದಿಗೆ ಉತ್ತಮ ಬಾಂಧವ್ಯ ಇದೆ. ನೀವು ಒಂದು ಮನವಿ ಪತ್ರ ಕೊಡಿ, ಸಮಸ್ಯೆ ಪರಿಹಾರಕ್ಕೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತೇನೆ. ಇದರಲ್ಲಿ ನಾನು ರಾಜಕೀಯ ಲಾಭವನ್ನು ನೋಡುವುದಿಲ್ಲ, ಯಾರು ಬೇಕಾದರೂ ಲಾಭ ತೆಗೆದುಕೊಳ್ಳಲಿ. ನಾನು ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸುತ್ತೇನೆ ಎಂದು ದೇವೇಗೌಡ ಸ್ಪಷ್ಟಪಡಿಸಿದರು.
ಈಗ ನ್ಯಾಯಮೂರ್ತಿಗಳ ಕೊರತೆಯಿಂದ ಸಮಸ್ಯೆ ತೀವ್ರವಾಗಿದೆ. ಜನಸಾಮಾನ್ಯರಿಗೆ ಹಿಂಸೆಯಾಗಿದೆ, ಹೈಕೋರ್ಟ್‌ನ ಹಿರಿಯ ಮತ್ತು ಕಿರಿಯ ವಕೀಲರು ಒಟ್ಟಾಗಿ ಎಲ್ಲರೂ ಧರಣಿಯಲ್ಲಿ ಭಾಗಿಯಾಗಿರುವುದು ಇದೇ ಮೊದಲು. ನಿವೃತ್ತ ನ್ಯಾಯಮೂರ್ತಿಗಳು ಕೂಡ ಭಾಗಿಯಾಗಿರುವುದು ಪರಿಸ್ಥಿತಿಯ ಗಂಭೀರತೆ ತೋರಿಸಿದೆ ಎಂದರು.
ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಇನ್ನೆರಡು ದಿನದಲ್ಲಿ ಪ್ರಾರಂಭಿಸದಿದ್ದರೆ, ನಾನು ಕೂಡ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತೇನೆ.
-ವಿ.ಗೋಪಾಲಗೌಡ, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ