×
Ad

‘ಕಾನೂನು ಸುವ್ಯವಸ್ಥೆ’ ಚರ್ಚೆಗೆ ಅರ್ಧದಿನದ ಕಲಾಪ ಆಹುತಿ

Update: 2018-02-06 20:18 IST

ಬೆಂಗಳೂರು, ಫೆ. 6: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯ ಅಪರಾಧ ಕೃತ್ಯಗಳಿಗೆ ಕುಖ್ಯಾತಿ ಪಡೆದುಕೊಳ್ಳುತ್ತಿದೆ’ ಎಂದು ಆರೋಪಿಸಿ ವಿಧಾನ ಮಂಡಲ ಉಭಯ ಸದನಗಳಲ್ಲಿ ಬಿಜೆಪಿ ಗದ್ದಲ ಸೃಷ್ಟಿಸಿದ್ದರಿಂದ ಅರ್ಧದಿನದ ಕಲಾಪ ಆಹುತಿಯಾಯಿತು.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯ ಬಳಿಕ ಸ್ಪೀಕರ್ ಕೋಳಿವಾಡ ಅವರು ನಿಲುವಳಿ ಸೂಚನೆಯಡಿ ‘ಕಾನೂನು ಸುವ್ಯವಸ್ಥೆ’ ವಿಷಯ ಪ್ರಸ್ತಾಪಕ್ಕೆ ಅವಕಾಶ ಕಲ್ಪಿಸಿದರು. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ರಾಜ್ಯದಲ್ಲಿ ಈ ವರೆಗೂ ಮೂರು ಮಂದಿ ಗೃಹ ಸಚಿವರಾಗಿದ್ದು, ಅಪರಾಧ ಕೃತ್ಯಗಳ ನಿಯಂತ್ರಣ ಮಾಡಲು ಈ ಸರಕಾರಕ್ಕೆ ಆಗುತ್ತಿಲ್ಲ ಎಂದು ಹೇಳಿದರು.

ಗೃಹ ಮಂತ್ರಿಗಳ ಮೇಲೊಬ್ಬ ಸೂಪರ್ ಗೃಹ ಮಂತ್ರಿ ಇದ್ದು, ವರ್ಗಾವಣೆ ದಂಧೆ, ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡುವ ಅವಕಾಶ ನೀಡದಿರುವ ಕಾರಣಕ್ಕೆ ರಾಜ್ಯದಲ್ಲಿ ಅಪರಾಧ ಕೃತ್ಯಗಳು ಮಿತಿಮೀರುತ್ತಿವೆ. ಕೊಲೆ, ಸುಲಿಗೆ, ಅತ್ಯಾಚಾರ ಸಾಮಾನ್ಯ ಘಟನೆಗಳಂತಾಗಿವೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಈ ಸರಕಾರ ಆಡಳಿತಕ್ಕೆ ಬಂದ ಬಳಿಕ 26 ಮಂದಿ ಬಿಜೆಪಿ-ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಗಳಾಗಿವೆ. ಉದ್ಯಾನನಗರಿ ಬೆಂಗಳೂರು ಕ್ರೈಂ ಸಿಟಿಯಾಗಿದೆ. ಪೊಲೀಸ್ ಅಧಿಕಾರಿಗಳೇ ನಮ್ಮ ಕಾರ್ಯಕರ್ತರಿಗೆ ಕಾಂಗ್ರೆಸ್ ಬೆಂಬಲಿಸಿ ಎಂದು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಗುಜರಾತ್‌ನಲ್ಲಿ ಮೋದಿ ಅವರು ಸಿಎಂ ಆಗಿದ್ದಾಗ ಕರಸೇವಕರ ಹತ್ಯೆ, ಕೋಮು ಹಿಂಸಾಚಾರ ನಡೆದಿತ್ತು ಎಂದು ಉಲ್ಲೇಖಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಇದರಿಂದ ಸದನದಲ್ಲಿ ಕೆಲಕಾಲ ಕಾವೇರಿದ ಚರ್ಚೆಯೂ ನಡೆಯಿತು.

ಆಗ ಏರಿದ ದನಿಯಲ್ಲಿ ಸಚಿವ ಜಾರ್ಜ್, ನಗರದ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 800 ಕೋಟಿ ರೂ. ನೀಡುತ್ತೇವೆಂದು ಹೇಳಿ ಹಣಕೊಟ್ಟಿಲ್ಲ. ಸಬ್‌ಅರ್ಬನ್ ರೈಲ್ವೆ ಯೋಜನೆಗೂ ಹಣ ನೀಡಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಸಚಿವ ಎಂ.ಬಿ. ಪಾಟೀಲ್, ಕೇಂದ್ರ ರಾಜ್ಯದ ಪಾಲಿನ ಹಣವನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಟೀಕಿಸಿದರು.

ಇದಕ್ಕೆ ಏರಿದ ಧ್ವನಿಯಲ್ಲೆ ಬಿಜೆಪಿಯ ಅರವಿಂದ ಲಿಂಬಾವಳಿ, ನೀವು ಕೇಳಿದ ಕೂಡಲೇ ಚೆಕ್ ಬರೆದು ಕೊಡಲಿಕ್ಕೆ ಇದು ನಿಮ್ಮ ಸರಕಾರವಲ್ಲ, ಅದಕ್ಕೆ ನೀತಿ- ನಿಯಮಗಳು ಇವೆ. ಮನಸೋ ಇಚ್ಛೆ ಹೇಳಿಕೆ ನೀಡುವುದನ್ನು ನಿಲ್ಲಿಸಿ, ಬೆಂಗಳೂರಿನ ಮಳೆ ನೀರು ಕಾಲುವೆ, ರಸ್ತೆ ಅಭಿವೃದ್ಧಿಗೆ ಗಮನಹರಿಸಿ ಎಂದು ಜಾರ್ಜ್‌ಗೆ ಸಲಹೆ ಮಾಡಿದರು.

‘ಕಾಂಗ್ರೆಸ್ ಪವಿತ್ರ ಗಂಗಾನದಿಯಂತೆ, ಏನೇ ಅಪರಾಧ ಮಾಡಿದರೂ ಪವಿತ್ರ ಆಗುತ್ತಾರೆ. ಹೀಗಾಗಿ ಅಲ್ಲಿ ಪಾಪಿಗಳು ಮಾತ್ರವೇ ಇರುತ್ತಾರೆ’ ಎಂದು ಬಿಜೆಪಿ ಸದಸ್ಯ ಸಿ.ಟಿ.ರವಿ, ಆಡಳಿತ ಪಕ್ಷದ ಸದಸ್ಯರನ್ನು ಕೆಣಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಾರ್ಜ್, ‘ಸತ್ತ ವ್ಯಕ್ತಿಗಳನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ ಎಂದು ದೂರಿದರು.

ಈ ವೇಳೆ ಮಾತನಾಡಿದ ಆರ್.ಅಶೋಕ್, ‘ಜೈಲಿಗೆ ಹೋಗಿ ಬಂದವರೆಂದು ಹೀಯ್ಯಳಿಸುತ್ತಿದ್ದ ಆನಂದ್ ಸಿಂಗ್‌ರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡಿದ್ದು, ಅವರಿಗೆ ಯಾವ ಗಂಜಳ ಹಾಕಿ ತೊಳೆದಿದ್ದೀರಿ’ ಎಂದು ಟೀಕಿಸಿದರು. ಈ ಹಂತದಲ್ಲಿ ಆಡಳಿತ-ವಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪೀಕರ್ ಕೋಳಿವಾಡ ಮಧ್ಯಾಹ್ನದ ಭೋಜನ ವಿರಾಮಕ್ಕೆ ಕಲಾಪ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News