×
Ad

ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ಈಗಲೂ ಆರೆಸ್ಸೆಸ್ ಕಾರ್ಯಕರ್ತರು: ಕೆ.ಎಸ್.ಈಶ್ವರಪ್ಪ

Update: 2018-02-06 20:51 IST

ಬೆಂಗಳೂರು, ಫೆ.6: ಈಗಲೂ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೆಸ್ಸೆಸ್ ಕಾರ್ಯಕರ್ತರು. ಹೀಗಿರುವಾಗ ಆರೆಸ್ಸೆಸ್‌ ಅನ್ನು ಭಯೋತ್ಪಾದಕ ಸಂಘಟನೆ ಎಂಬ ಹಣೆಪಟ್ಟಿ ಕಟ್ಟುವುದು ಎಷ್ಟು ಸರಿ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಬುಧವಾರ ವಿಧಾನಪರಿಷತ್‌ನಲ್ಲಿ ನಿಯಮ 68ರಡಿ ‘ರಾಜ್ಯದ ಕಾನೂನು ಸುವ್ಯವಸ್ಥೆ’ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಸಂಘಪರಿವಾರ ದೇಶ ಭಕ್ತ ಸಂಘಟನೆಯಾಗಿದೆ. ದೇಶದಾದ್ಯಂತ ಕೋಟ್ಯಾಂತರ ಕಾರ್ಯಕರ್ತರನ್ನು ಹೊಂದಿದ್ದೇವೆ. ಈಗಿರುವಾಗ ನಮ್ಮ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯುವ ಮೂಲಕ ದೇಶದ ಜನತೆಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜವಹಾರಲಾಲ್ ನೆಹರು ಜಮ್ಮು-ಕಾಶ್ಮೀರದಲ್ಲಿ ಒಂದೇ ಒಂದು ಆರೆಸ್ಸೆಸ್‌ನ ಬಾವುಟ ಹಾರಾಡಿಸಲು ಬಿಡುವುದಿಲ್ಲವೆಂದು ಹೇಳಿದ್ದರು. ಆದರೆ, ಈಗ ಪ್ರತೀ ಹಳ್ಳಿ, ಕೇರಿಯಲ್ಲಿ ನಮ್ಮ ಕೇಸರಿ ಬಾವುಟ ಹಾರಾಡುತ್ತಿದೆ. ಹಾಗೆಯೇ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಆರೆಸ್ಸೆಸ್‌ ಅನ್ನು ನಿಷೇಧ ಮಾಡಿದರು. ಆದರೂ ಆರೆಸ್ಸೆಸ್ ಹೆಮ್ಮರವಾಗಿ ಬೆಳೆಯುತ್ತಿದೆ. ಆರೆಸ್ಸೆಸ್ ಕಾರ್ಯಕರ್ತರ ಕತ್ತು ಸೀಳಿದರೂ ಸಂಘಪರಿವಾರದ ಸಿದ್ಧಾಂತವನ್ನು ಬಿಡುವುದಿಲ್ಲವೆಂದು ತಿಳಿಸಿದರು.

ರಾಜ್ಯದಲ್ಲಿ ಪ್ರತಿದಿನ ಎರಡು ಕೊಲೆ, ಮೂರು ಅತ್ಯಾಚಾರ ಪ್ರಕರಣಗಳು ವರದಿ ಆಗುತ್ತಿವೆ. ಇದರ ಜೊತೆಗೆ ಹಿಂದೂ ಕಾರ್ಯಕರ್ತರ ಕೊಲೆಗಳು ನಡೆಯುತ್ತಿವೆ. ಆದರೂ ರಾಜ್ಯ ಸರಕಾರ ಏನೂ ಆಗಿಲ್ಲವೆಂಬಂತೆ ಸುಮ್ಮನಾಗಿದೆ. ಇಂತಹ ಗೂಂಡಾ ರಾಜ್ಯ ಸರಕಾರವನ್ನು ನನ್ನ ಜೀವಮಾನದಲ್ಲಿ  ನೋಡಿಲ್ಲವೆಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News